×
Ad

ಚಾಂಪಿಯನ್ಸ್ ಟ್ರೋಫಿ: ಆಸ್ಟ್ರೇಲಿಯಕ್ಕೆ ಇಂದು ಮಾಡು-ಮಡಿ ಪಂದ್ಯ

Update: 2017-06-09 23:41 IST

ಬರ್ಮಿಂಗ್‌ಹ್ಯಾಮ್, ಜೂ.9: ಚಾಂಪಿಯನ್ಸ್ ಟ್ರೋಫಿಯಲ್ಲಿ ಶನಿವಾರ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ನ ವಿರುದ್ಧ ಗೆಲ್ಲಲೇಬೇಕಾದ ಪಂದ್ಯವನ್ನು ಆಡಲಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಯಾಗದೆಂಬ ವಿಶ್ವಾಸದಲ್ಲಿದೆ.

ಆತಿಥೇಯ ಇಂಗ್ಲೆಂಡ್ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಈಗಾಗಲೇ ಸೆಮಿ ಫೈನಲ್‌ಗೆ ತಲುಪಿದೆ. ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯ ಮಳೆಗಾಹುತಿಯಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಸೆಮಿ ಫೈನಲ್ ಅವಕಾಶಕ್ಕೆ ತೀವ್ರ ಹಿನ್ನಡೆಯಾಗಿದೆ.

ಆಸ್ಟ್ರೇಲಿಯ ಕಳೆದೆರಡು ಪಂದ್ಯಗಳಲ್ಲಿ ಪೂರ್ಣ ಪಂದ್ಯವನ್ನಾಡಲು ಸಾಧ್ಯಗಾಗದೇ ಎದುರಾಳಿ ತಂಡದೊಂದಿಗೆ ಅಂಕ ಹಂಚಿಕೊಂಡಿದೆ. 2 ಪಂದ್ಯಗಳಲ್ಲಿ 2 ಅಂಕ ಗಳಿಸಿರುವ ಆಸೀಸ್ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ.

ಎಡ್ಜ್‌ಬ್ಯಾಸ್ಟನ್‌ನಲ್ಲಿ ಈತನಕ ನಡೆದಿರುವ ಎಲ್ಲ ಮೂರು ಪಂದ್ಯಗಳಿಗೆ ಮಳೆ ಅಡ್ಡಿಯಾಗಿದೆ. ಇದೇ ಮೈದಾನದಲ್ಲಿ ಆಸ್ಟ್ರೇಲಿಯ-ನ್ಯೂಝಿಲೆಂಡ್ ಪಂದ್ಯ ಮಳೆಗಾಹುತಿಯಾದರೆ, ಭಾರತ ಹಾಗೂ ಪಾಕಿಸ್ತಾನ, ದಕ್ಷಿಣ ಆಫ್ರಿಕ-ಪಾಕಿಸ್ತಾನ ಪಂದ್ಯಗಳಿಗೆ ಮಳೆ ಅಡ್ಡಿಯಾದ ಕಾರಣ ಡಿಎಲ್ ನಿಯಮದಂತೆ ಫಲಿತಾಂಶ ನಿರ್ಧಾರವಾಗಿತ್ತು.

ಮಳೆಬಾಧಿತ ಪಂದ್ಯಗಳಲ್ಲಿ ಆಸೀಸ್‌ನ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿಲ್ಲ. ಇದೀಗ ಸಮತೋಲಿತ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸಬೇಕಾಗಿದೆ. ಆಸೀಸ್‌ನ ಅಗ್ರ ಕ್ರಮಾಂಕದಲ್ಲಿ ಡೇವಿಡ್ ವಾರ್ನರ್, ಆ್ಯರೊನ್ ಫಿಂಚ್ ಹಾಗೂ ಸ್ಟೀವನ್ ಸ್ಮಿತ್ ಅವರಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮ್ಯಾಚ್ ಪ್ರಾಕ್ಟೀಸ್‌ನ ಕೊರತೆ ಎದುರಿಸುತ್ತಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಕಳೆದ ಪಂದ್ಯದಲ್ಲಿ ಆಸೀಸ್‌ನ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದು, ಬಾಂಗ್ಲಾವನ್ನು 182 ರನ್‌ಗೆ ನಿಯಂತ್ರಿಸಿದ್ದರು. ಆದರೆ, ಭಾರೀ ಮಳೆಯಿಂದಾಗಿ ಈ ಪಂದ್ಯದಲ್ಲಿ ಫಲಿತಾಂಶ ಬರಲಿಲ್ಲ.

ಆಸೀಸ್‌ನ ಪ್ರಮುಖ ಬೌಲರ್ ಮಿಚೆಲ್ ಸ್ಟಾರ್ಕ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರೆ, ಜೋಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಅವರು ಸ್ಟಾರ್ಕ್‌ಗೆ ಉತ್ತಮ ಸಾಥ್ ನೀಡಿದ್ದರು. 4 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಪಡೆದ ಲೆಗ್-ಸ್ಪಿನ್ನರ್ ಆಡಮ್ ಝಾಂಪ ಗಮನಾರ್ಹ ಪ್ರದರ್ಶನ ನೀಡಿದ್ದರು.

 ಮತ್ತೊಂದೆಡೆ ಇಂಗ್ಲೆಂಡ್ ತಂಡ ಕಳೆದೆರಡು ಪಂದ್ಯಗಳಲ್ಲಿ 300ಕ್ಕೂ ಅಧಿಕ ರನ್ ಗಳಿಸಿತ್ತು. ಕಿವೀಸ್ ವಿರುದ್ಧ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಅರ್ಧಶತಕ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಜೇಯ 133 ರನ್ ಗಳಿಸಿದ್ದ ಜೋ ರೂಟ್ ಕಿವೀಸ್ ವಿರುದ್ಧ ಅರ್ಧಶತಕ ಬಾರಿಸಿದ್ದರು.

ಪಂದ್ಯದ ಸಮಯ: ಮಧ್ಯಾಹ್ನ 3:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News