ಆಂಗ್ಲರಿಗೆ ಮೊರ್ಗನ್ - ಸ್ಟೋಕ್ಸ್ ಆಸರೆ : ಆಸ್ಟ್ರೇಲಿಯ 277/9
ಬರ್ಮಿಂಗ್‌ಹ್ಯಾಮ್,ಜೂ.10: ಆಸ್ಟ್ರೇಲಿಯ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ‘ಎ’ ಗುಂಪಿನ ಪಂದ್ಯದಲ್ಲಿ ಗೆಲುವಿಗೆ 278 ರನ್‌ಗಳ ಸವಾಲನ್ನು ಪಡೆದಿರುವ ಇಂಗ್ಲೆಂಡ್‌ನ ಆಟಕ್ಕೆ ಮಳೆ ಅಡ್ಡಿಪಡಿಸಿದ್ದರೂ ಗೆಲುವಿಗಾಗಿ ಹೋರಾಟ ಮುಂದುವರಿದಿದೆ.
ನಾಯಕ ಇಯಾನ್ ಮೊರ್ಗನ್ ಮತ್ತು ಬೆನ್ ಸ್ಟೋಕ್ಸ್ ಅರ್ಧಶತಕಗಳ ಕೊಡುಗೆ ನೀಡಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ನ್ನು ಮುಂದುವರಿಸಿದರು. ಒಂದು ಹಂತದಲ್ಲಿ ಮಳೆಯಿಂದಾಗಿ ಆಟ ನಿಂತಾಗ ಇಂಗ್ಲೆಂಡ್ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 35 ರನ್ ಗಳಿಸಿತ್ತು . ಬಳಿಕ ಆಟ ಆರಂಭಗೊಂಡಾಗ ಮೊರ್ಗನ್ ಮತ್ತು ಸ್ಟೋಕ್ಸ್ ತಂಡಕ್ಕೆ ನೆರವು ನೀಡಿದರು.
ಆಸ್ಟ್ರೇಲಿಯಕ್ಕೆ ಸೆಮಿಫೈನಲ್‌ಗೇರಲು ಈ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಆಸ್ಟ್ರೇಲಿಯದ ಹೇಝಲ್‌ವುಡ್ (17ಕ್ಕೆ 2) ಮತ್ತು ಮಿಚೆಲ್ ಸ್ಟಾರ್ಕ್(16ಕ್ಕೆ1) ದಾಳಿಗೆ ಸಿಲುಕಿದ ಇಂಗ್ಲೆಂಡ್‌ನ ಅಗ್ರ ಸರದಿಯ ದಾಂಡಿಗರು ಕಳಪೆ ಪ್ರದರ್ಶನ ನೀಡಿ ಪೆವಿಲಿಯನ್ ಸೇರಿದ್ದಾರೆ.
ಸ್ಟಾರ್ಕ್ ಅವರ ಮೊದಲ ಓವರ್‌ನ ಮೊದಲ ಎಸೆತವನ್ನು ಜೇಸನ್ ರಾಯ್ ಬೌಂಡರಿಗಟ್ಟಿದರು. ಆದರೆ ಎರಡನೆ ಎಸೆತದಲ್ಲಿ ಚೆಂಡನ್ನು ಎದುರಿಸಲು ಹೋಗಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.ಎರಡನೆ ಓವರ್‌ನಲ್ಲಿ ಹೇಲ್ಸ್ (0) ಖಾತೆ ತೆರೆಯದೆ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.
6 ಓವರ್‌ನ 4ನೆ ಎಸೆತದಲ್ಲಿ ರೂಟ್ (15) ಅವರು ಹೇಝಲ್‌ವುಡ್ ಎಸೆತದಲ್ಲಿ ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ನೀಡಿದರು. ಬಳಿಕ ನಾಯಕ ಇಯಾನ್ ಮೊರ್ಗನ್ ಮತ್ತು ಬೆನ್ ಸ್ಟೋಕ್ಸ್ ಜೊತೆಯಾಗಿ ಇಂಗ್ಲೆಂಡ್‌ನ ಬ್ಯಾಟಿಂಗ್‌ನ್ನು ಮುನ್ನಡೆಸುವ ಹೊತ್ತಿಗೆ ಮಳೆ ಅವರ ಬ್ಯಾಟಿಂಗ್‌ಗೆ ಅಡ್ಡಿಪಡಿಸಿ ಆಟ ಸ್ಥಗಿತಗೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿದೆ.
ಆ್ಯರೊನ್ ಫಿಂಚ್(68), ನಾಯಕ ಸ್ಟೀವ್ ಸ್ಮಿತ್(56) ಮತ್ತು ಟ್ರಾವಿಸ್ ಹೆಡ್(ಔಟಾಗದೆ 71) ಅರ್ಧಶತಕಗಳ ನೆರವಿನಲ್ಲಿ ಆಸ್ಟ್ರೇಲಿಯ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
7.2ನೆ ಓವರ್‌ನಲ್ಲಿ ಡೇವಿಡ್ ವಾರ್ನರ್(21) ಅವರು ವುಡ್ ಎಸೆತದಲ್ಲಿ ಬಟ್ಲರ್‌ಗೆ ಕ್ಯಾಚ್ ನೀಡುವುದರೊಂದಿಗೆ ಆಸ್ಟ್ರೇಲಿಯದ ಮೊದಲ ವಿಕೆಟ್ ಪತನಗೊಂಡಿತು. ಎರಡನೆ ವಿಕೆಟ್‌ಗೆ ಆ್ಯರೊನ್ ಫಿಂಚ್ ಮತುತಿ ಸ್ಟೀವ್ ಸ್ಮಿತ್ 96 ರನ್‌ಗಳ ಜೊತೆಯಾಟ ನೀಡಿದರು. ಇವರ ಬ್ಯಾಟಿಂಗ್ ನೆರವಿನಲ್ಲಿ ತಂಡದ ಸ್ಕೋರ್ 22.5 ಓವರ್‌ನಲ್ಲಿ 136ಕ್ಕೆ ತಲುಪಿತು. ಮಾರ್ಕ್ ವುಡ್(33ಕ್ಕೆ 4) ಮತ್ತು ಆದಿಲ್ ರಶೀದ್(41ಕ್ಕೆ 4) ಮತ್ತು ಬೆನ್ ಸ್ಟೋಕ್ಸ್ (61ಕ್ಕೆ 1) ದಾಳಿಗೆ ಸಿಲುಕಿದ ಆಸ್ಟ್ರೇಲಿಯ ಕೊನೆಯಲ್ಲಿ ಬೇಗನೆ ವಿಕೆಟ್‌ಗಳನ್ನು ಕೈಚೆಲ್ಲಿತು.
ಹೆನ್ರಿಕ್ಸ್ (17), ಮ್ಯಾಕ್ಸ್‌ವೆಲ್(20),ಮ್ಯಾಥ್ಯೂ ವೇಡ್(2), ಮಿಚೆಲ್ ಸ್ಟಾರ್ಕ್(0), ಕಮಿನ್ಸ್(4), ಝಾಂಪ (0) ಇವರನ್ನು ಬೇಗನೆ ಕಳೆದುಕೊಂಡಿತು. ಆದರೆ ಹೆಡ್ ಅವರು ಇಂಗ್ಲೆಂಡ್‌ನ ದಾಳಿಯನ್ನು ಪುಡಿ ಪುಡಿ ಮಾಡಿದರು. ಅವರು 64 ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 71 ರನ್ ಗಳಿಸಿ ಔಟಾಗದೆ ಉಳಿದರು. ಹೆಡ್ ಅವರು ಆಸ್ಟ್ರೇಲಿಯದ ಪರ ಆಟದಲ್ಲಿ ಸಿಕ್ಸರ್ ಸಿಡಿಸಿದ ಏಕೈಕ ಆಟಗಾರ. ಅವರು ಎರಡು ಸಿಕ್ಸರ್ ಸಿಡಿಸಿದ್ದರು.