ಶ್ರೀಲಂಕಾ ಬ್ಯಾಟ್ಸ್‌ಮನ್ ಕುಶಾಲ್ ಪೆರೇರ ಕೂಟದಿಂದ ಹೊರಕ್ಕೆ
ಲಂಡನ್, ಜೂ.10: ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಶ್ರೀಲಂಕಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕುಶಾಲ್ ಪೆರೇರ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ ಪೆರೇರ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿಯುತ್ತಿರುವ ಶ್ರೀಲಂಕಾದ ಎರಡನೆ ಬ್ಯಾಟ್ಸ್‌ಮನ್ ಆಗಿದ್ದಾರೆ. ಚಾಮರಾ ಕಪುಗಡೆರಾ ಈಗಾಗಲೇ ಕೂಟದಿಂದ ಹೊರಗುಳಿದಿದ್ದಾರೆ.
ಐಸಿಸಿ ಟೂರ್ನಿಯ ತಾಂತ್ರಿಕ ಸಮಿತಿಯು ಪೆರೇರರಿಂದ ತೆರವಾಗಿರುವ ಸ್ಥಾನಕ್ಕೆ ಆಲ್‌ರೌಂಡರ್ ಧನಂಜಯ್ ಡಿ’ಸಿಲ್ವಾರನ್ನು ಆಯ್ಕೆ ಮಾಡಲು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡಿದೆ.
ಭಾರತ ವಿರುದ್ಧ ಓವಲ್ ಮೈದಾನದಲ್ಲಿ ಗುರುವಾರ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಪೆರೇರಗೆ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದು, 47 ರನ್‌ಗೆ ಗಾಯಾಳು ನಿವೃತ್ತಿಯಾಗಿದ್ದರು. ಇದಕ್ಕೂ ಮೊದಲು ನಾಯಕ ಆ್ಯಂಜೆಲೊ ಮ್ಯಾಥ್ಯೂಸ್‌ರೊಂದಿಗೆ 75 ರನ್ ಜೊತೆಯಾಟ ನಡೆಸಿದ್ದರು.
ಮೆಂಡಿಸ್ ಬದಲಿಗೆ ಶ್ರೀಲಂಕಾ ಪಾಳಯಕ್ಕೆ ಸೇರ್ಪಡೆಯಾಗಲಿರುವ ಧನಂಜಯ್ ಆಫ್-ಸ್ಪಿನ್ನರ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಲಂಕೆಯ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 16 ಏಕದಿನ ಪಂದ್ಯಗಳನ್ನಾಡಿರುವ ಧನಂಜಯ್ 25.69ರ ಸರಾಸರಿಯಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.