ವಿಂಬಲ್ಡನ್ ಟೂರ್ನಿ ಆರಂಭಕ್ಕೆ ಮುನ್ನವೇ ಶರಪೋವಾ ಔಟ್

Update: 2017-06-11 03:57 GMT

ಲಂಡನ್, ಜೂ.11: ಖ್ಯಾತ ಟೆನಿಸ್ ತಾರೆ ಮರಿಯಾ ಶರಪೋವಾ ಅವರ ಅಭಿಮಾನಿಗಳಿಗೆ ಮತ್ತೆ ನಿರಾಸೆ ಕಾದಿದೆ. ತೊಡೆ ಗಾಯದಿಂದ ಚೇತರಿಸಿಕೊಳ್ಳದ ಅವರು ವಿಂಬಲ್ಡನ್ ಕೂಟದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಡೋಪಿಂಗ್ ನಿಷೇಧದ ಅವಧಿ ಮುಗಿದ ಬಳಿಕ ವೃತ್ತಿಜೀವನದ ಎರಡನೇ ಇನಿಂಗ್ಸ್ ಆರಂಭವಾಗುತ್ತಿದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ಇದರಿಂದ ಆಘಾತವಾಗಿದೆ.

2004ರಲ್ಲಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಚಾಂಪಿಯನ್ ಆಗಿದ್ದ 30 ವರ್ಷದ ಈ ರಷ್ಯಾ ಬೆಡಗಿ, ಈ ಬಾರಿ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಸಂಪಾದಿಸಲು ಅರ್ಹತಾ ಸುತ್ತಿನಲ್ಲಿ ಆಡಬೇಕಿತ್ತು.

"ಮತ್ತೊಮ್ಮೆ ಸ್ಕ್ಯಾನ್ ಮಾಡಿದ ಬಳಿಕ, ತೊಡೆ ಗಾಯ ಇನ್ನೂ ಸಂಪೂರ್ಣ ಗುಣವಾಗದೇ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹುಲ್ಲುಹಾಸಿನ ಅಂಗಣದ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಸ್ಟ್ಯಾನ್‌ಫೋರ್ಡ್‌ನಲ್ಲಿ ಜುಲೈ 31ರಿಂದ ನಡೆಯುವ ಟೂರ್ನಿಯಲ್ಲಾದರೂ ಭಾಗವಹಿಸಲು ಶ್ರಮಪಡುತ್ತೇನೆ ಎಂದು ಹೇ:ಳಿದ್ದಾರೆ.

ಮಾಜಿ ವಿಶ್ವ ನಂಬರ್ ವನ್ ತಾರೆ ಇದೀಗ ಪ್ರಮುಖ ಟೂರ್ನಿಗಳಲ್ಲಿ ಆಡಲು ಅರ್ಹತಾ ಸುತ್ತು ದಾಟಬೇಕಿದೆ. ಏಕೆಂದರೆ ಅವರ ವಿಶ್ವರ್ಯಾಂಕಿಂಗ್ ಪಾಯಿಂಟ್‌ಗಳು 15 ತಿಂಗಳ ಅವಧಿಯ ನಿಷೇಧದ ವೇಳೆ ಅನೂರ್ಜಿತಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News