×
Ad

ನಾಳೆ ಮೊದಲ ಸೆಮಿಫೈನಲ್

Update: 2017-06-13 23:41 IST

ಕಾರ್ಡಿಫ್, ಜೂ.13: ಕ್ರಿಕೆಟ್ ಪಂಡಿತರ ಎಲ್ಲ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿವೆ. ಟೂರ್ನಿಯ ಆರಂಭಕ್ಕೆ ಮೊದಲು ಫೇವರಿಟ್ ಹಣೆಪಟ್ಟಿ ಕಟ್ಟಿಕೊಂಡಿರುವ ವಿಶ್ವದ ನಂ.1 ತಂಡ ದಕ್ಷಿಣ ಆಫ್ರಿಕ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಲೀಗ್ ಹಂತದಲ್ಲೇ ಸೋತು ನಿರ್ಗಮಿಸಿವೆ.

ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾವನ್ನು 3 ವಿಕೆಟ್‌ಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿ ಅಚ್ಚರಿ ಮೂಡಿಸಿರುವ ವಿಶ್ವದ ನಂ.8ನೆ ತಂಡ ಪಾಕಿಸ್ತಾನಕ್ಕೆ ಫೈನಲ್ ತಲುಪಬೇಕಾದರೆ ಆತಿಥೇಯ ಇಂಗ್ಲೆಂಡ್‌ನ ಕಠಿಣ ಸವಾಲು ಎದುರಿಸಬೇಕಾಗಿದೆ.

ಪಾಕ್ ತಂಡ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಹೀನಾಯ ಸೋಲಿನೊಂದಿಗೆ ಕೂಟದಲ್ಲಿ ತನ್ನ ಅಭಿಯಾನ ಆರಂಭಿಸಿತ್ತು. ಭಾರತ ವಿರುದ್ಧ ಪಾಕ್ ಸೋತಾಗ ತವರಿನ ಅಭಿಮಾನಿಗಳು ಭಾರೀ ಆಕ್ರೋಶ ಹೊರಹಾಕಿದ್ದರು. ದಕ್ಷಿಣ ಆಫ್ರಿಕ ವಿರುದ್ಧದ 2ನೆ ಲೀಗ್ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಾಕ್‌ಗೆ ಡಿಎಲ್ ನಿಯಮದಂತೆ 19 ರನ್‌ಗಳ ಗೆಲುವು ದಕ್ಕಿತ್ತು.

ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗೆ 237 ರನ್ ಗುರಿ ಪಡೆದಿದ್ದ ಪಾಕ್ ತಂಡ ಒಂದು ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿತ್ತು. ಶ್ರೀಲಂಕಾದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಪಾಕ್‌ನ ವಿಕೆಟ್‌ಕೀಪರ್, ನಾಯಕ ಸರ್ಫರಾಝ್ ಅಹ್ಮದ್ ಬಾಲಂಗೋಚಿ ಮುಹಮ್ಮದ್ ಆಮಿರ್‌ರೊಂದಿಗೆ 8ನೆ ವಿಕೆಟ್‌ಗೆ ನಿರ್ಣಾಯಕ ಜೊತೆಯಾಟ ನಡೆಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.

  ಮತ್ತೊಂದೆಡೆ, ಇಂಗ್ಲೆಂಡ್ ತಂಡ ತವರು ನೆಲದಲ್ಲಿ ಆಡಿರುವ ಲೀಗ್ ಹಂತದ ಎಲ್ಲ ಮೂರೂ ಪಂದ್ಯಗಳನ್ನು ಜಯಿಸಿ ಅಜೇಯವಾಗಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದು, ಫೈನಲ್‌ಗೆ ತಲುಪುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇಂಗ್ಲೆಂಡ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಎದುರಾಳಿಗೆ ಸವಾಲಾಗುತ್ತಾ ಬಂದಿದೆ. ವೇಗದ ಬೌಲರ್‌ಗಳ ಜೊತೆಗೆ ಸ್ಪಿನ್ನರ್ ಆದಿಲ್ ರಶೀದ್ ತಂಡದ ಗೆಲುವಿಗೆ ಆಧಾರವಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ನಾಯಕ ಇಯಾನ್ ಮೊರ್ಗನ್, ಜೋ ರೂಟ್, ಬೆನ್ ಸ್ಟೋಕ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಸೋಮವಾರ ಶ್ರೀಲಂಕಾ ವಿರುದ್ಧ ಅನಿರೀಕ್ಷಿತ ಗೆಲುವು ಪಡೆದಿದ್ದ ಪಾಕ್ ತಂಡ ಬುಧವಾರ ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 6-4 ಮುನ್ನಡೆಯಲ್ಲಿದೆ. ಪಾಕಿಸ್ತಾನ ತಂಡ 1996ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ್ನು ಕೊನೆಯ ಬಾರಿ ಮಣಿಸಿತ್ತು. ಉಭಯ ತಂಡಗಳು 2010ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ ಜಯಭೇರಿ ಬಾರಿಸಿತ್ತು.

ಐಸಿಸಿ ಟೂರ್ನಿಗಳಲ್ಲಿ ಇಂಗ್ಲೆಂಡ್-ಪಾಕಿಸ್ತಾನದ ಸಾಧನೆ

*1979 ಪ್ರುಡೆನ್ಶಿಯಲ್ ವಿಶ್ವಕಪ್: ಇಂಗ್ಲೆಂಡ್‌ಗೆ 14 ರನ್ ಜಯ

*1983 ಪ್ರುಡೆನ್ಶಿಯಲ್ ವಿಶ್ವಕಪ್: ಇಂಗ್ಲೆಂಡ್‌ಗೆ 8 ವಿಕೆಟ್‌ಗಳ ಜಯ

*1983 ಪ್ರುಡೆನ್ಶಿಯಲ್ ವಿಶ್ವಕಪ್: ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಗೆಲುವು

*1987 ರಿಲಯನ್ಸ್ ವಿಶ್ವಕಪ್: ಪಾಕಿಸ್ತಾನಕ್ಕೆ 18 ರನ್‌ಗಳ ಜಯ

*1987 ರಿಲಯನ್ಸ್ ವಿಶ್ವಕಪ್: ಪಾಕಿಸ್ತಾನಕ್ಕೆ ಏಳು ವಿಕೆಟ್‌ಗಳ ಗೆಲುವು

* 1992 ಬೆನ್ಸನ್-ಹೆಡ್ಜೆಸ್ ವಿಶ್ವಕಪ್: ಫಲಿತಾಂಶರಹಿತ

*1992 ಬೆನ್ಸನ್-ಹೆಡ್ಜಸ್ ವಿಶ್ವಕಪ್: ಪಾಕಿಸ್ತಾನಕ್ಕೆ 22 ರನ್ ಜಯ

* 1996 ವಿಲ್ಸ್ ವಿಶ್ವಕಪ್: ಪಾಕಿಸ್ತಾನಕ್ಕೆ ಏಳು ವಿಕೆಟ್‌ಗಳ ಗೆಲುವು

*2003 ಐಸಿಸಿ ವಿಶ್ವಕಪ್: ಇಂಗ್ಲೆಂಡ್‌ಗೆ 112 ರನ್ ಗೆಲುವು

*2009 ಟ್ವೆಂಟಿ-20 ವಿಶ್ವಕಪ್: ಇಂಗ್ಲೆಂಡ್‌ಗೆ 48 ರನ್ ಜಯ

*2010 ಟ್ವೆಂಟಿ-20 ವಿಶ್ವಕಪ್: ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳ ಗೆಲುವು

...........

ತಂಡಗಳು: ಇಂಗ್ಲೆಂಡ್: ಇಯಾನ್ ಮೊರ್ಗನ್(ನಾಯಕ), ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಜಾಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟೀವನ್ ಫಿನ್.

ಪಾಕಿಸ್ತಾನ: ಸರ್ಫರಾಝ್ ಅಹ್ಮದ್(ನಾಯಕ), ಅಹ್ಮದ್ ಶಹಝಾದ್, ಅಝರ್ ಅಲಿ, ಬಾಬರ್ ಆಝಂ, ಫಹೀಮ್ ಅಶ್ರಫ್, ಫಕರ್ ಝಮಾನ್, ಹಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಸಿಂ, ಜುನೈದ್ ಖಾನ್, ಮುಹಮ್ಮದ್ ಆಮಿರ್, ಮುಹಮ್ಮದ್ ಹಫೀಝ್, ಶಾದಾಬ್ ಖಾನ್, ಶುಐಬ್ ಮಲಿಕ್.

ಪಂದ್ಯದ ಸಮಯ ಮಧ್ಯಾಹ್ನ 3:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News