2018ರ ಫಿಫಾ ವಿಶ್ವಕಪ್‌ಗೆ ಇರಾನ್ ಅರ್ಹತೆ

Update: 2017-06-13 18:22 GMT

ಟೆಹರಾನ್, ಜೂ.13: ಉಝ್ಬೇಕಿಸ್ತಾನದ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಇರಾನ್ ತಂಡ 2018ರ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

 ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಇರಾನ್‌ನ ಪರ ಸರ್ದಾರ್ ಅಝವೌನ್(23ನೆ ನಿಮಿಷ) ಹಾಗೂ ಮೆಹದಿ ತರೆಮಿ(88ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಇರಾನ್ ‘ಎ’ ಗುಂಪಿನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಆರನೆ ಜಯ ಸಾಧಿಸಿದೆ.ಒಟ್ಟು 20 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. ದಕ್ಷಿಣ ಕೊರಿಯಾ(13) ಎರಡನೆ ಸ್ಥಾನದಲ್ಲಿದ್ದು, ಮಂಗಳವಾರ ಕತರ್ ತಂಡವನ್ನು ಎದುರಿಸಲಿದೆ.

 ಅರ್ಹತಾ ಸುತ್ತಿನ ಮೂರನೆ ಹಂತದಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿರುವ ಇರಾನ್ ತಂಡ ತನ್ನ ಗೆಲುವಿನ ಅಭಿಯಾನದಲ್ಲಿ ಒಂದು ಗೋಲನ್ನು ಬಿಟ್ಟುಕೊಟ್ಟಿಲ್ಲ. ಈ ಮೂಲಕ ಏಷ್ಯಾದ ಫುಟ್ಬಾಲ್ ದೈತ್ಯನಾಗಿ ಹೊರಹೊಮ್ಮುತ್ತಿದೆ.

ಇರಾನ್ ತಂಡ 1978, 1998, 2006 ಹಾಗೂ 2014ರಲ್ಲಿ ಫಿಫಾ ವಿಶ್ವಕಪ್‌ನಲ್ಲಿ ಆಡಿದೆ. ಉಝ್ಬೇಕಿಸ್ತಾನ ಈ ತನಕ ಒಂದೂ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿಲ್ಲ. 8 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಉಝ್ಬೇಕಿಸ್ತಾನ ವಿಶ್ವಕಪ್‌ಗೆ ಅರ್ಹತೆಯಾಗುವ ವಿಶ್ವಾಸವನ್ನು ಉಳಿಸಿಕೊಳ್ಳಲು ಇನ್ನೆರಡು ಪಂದ್ಯಗಳನ್ನು ಜಯಿಸಬೇಕಾಗಿದೆ. 2018ರ ಜೂ.14 ರಿಂದ ಜು.15ರ ತನಕ ರಶ್ಯದಲ್ಲಿ ನಡೆಯಲಿರುವ 2018ರ ಫಿಫಾ ವಿಶ್ವಕಪ್‌ಗೆ ಆತಿಥೇಯ ರಶ್ಯ ಹಾಗೂ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡಗಳು ಸ್ಥಾನ ಗಿಟ್ಟಿಸಿಕೊಂಡಿದ್ದು, ಇದೀಗ ಇರಾನ್ ತಂಡ ಈ ಎರಡು ತಂಡವನ್ನು ಸೇರಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News