×
Ad

ಇಂಗ್ಲೆಂಡ್‌ನ್ನು 211 ರನ್‌ಗೆ ಆಲೌಟ್ ಮಾಡಿದ ಪಾಕಿಸ್ತಾನ

Update: 2017-06-14 18:45 IST

ಕಾರ್ಡಿಫ್, ಜೂ.14: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು 211 ರನ್‌ಗೆ ನಿಯಂತ್ರಿಸಲು ಯಶಸ್ವಿಯಾಗಿದೆ.

ಟಾಸ್ ಜಯಿಸಿದ ಪಾಕ್ ನಾಯಕ ಸರ್ಫರಾಝ್ ಅಹ್ಮದ್ ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ವೇಗದ ಬೌಲರ್‌ಗಳಾದ ಹಸನ್ ಅಲಿ(3-35), ಜುನೈದ್ ಖಾನ್(2-42) ಹಾಗೂ ರುಮಾನ್ ರಾಯಿಸ್(2-44) ಶಿಸ್ತುಬದ್ಧ ದಾಳಿಗೆ ನಿರುತ್ತರವಾದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 211 ರನ್‌ಗೆ ಆಲೌಟಾಯಿತು.

 ಇಂಗ್ಲೆಂಡ್‌ನ ಪರ ಜೋ ರೂಟ್(46) ಅಗ್ರ ಸ್ಕೋರರ್ ಎನಿಸಿಕೊಂಡರು. ಜಾನಿ ಬೈರ್‌ಸ್ಟೋವ್(43), ನಾಯಕ ಇಯಾನ್ ಮೊರ್ಗನ್(33)ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್(34) ಎರಡಂಕೆ ಸ್ಕೋರ್ ದಾಖಲಿಸಿದರು.

ಬಟ್ಲರ್(4), ಮೊಯಿನ್ ಅಲಿ (11), ರಶೀದ್(7), ಪ್ಲುಂಕೆಟ್(9) ನಿರೀಕ್ಷಿತ ಪ್ರದರ್ಶನ ನೀಡದೇ ಬೇಗನೆ ವಿಕೆಟ್ ಒಪ್ಪಿಸಿದರು.

 ಇಂಗ್ಲೆಂಡ್ ತಂಡದಲ್ಲಿ ಜೇಸನ್ ರಾಯ್ ಬದಲಿಗೆ ಜಾನಿ ಬೈರ್‌ಸ್ಟೋವ್ ಅವಕಾಶ ಪಡೆದಿದ್ದರು. ಪಾಕಿಸ್ತಾನ ತಂಡದಲ್ಲಿ ವೇಗದ ಬೌಲರ್ ಮುಹಮ್ಮದ್ ಆಮಿರ್ ಬದಲಿಗೆ ಹೊಸಮುಖ ರುಮಾನ್ ರಾಯಿಸ್ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ. ರಾಯಿಸ್‌ಗೆ ಇದು ಚೊಚ್ಚಲ ಏಕದಿನ ಪಂದ್ಯವಾಗಿದೆ.

ಶ್ರೀಲಂಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ನಾಯಕ ಸರ್ಫರಾಝ್ ಅಹ್ಮದ್‌ರೊಂದಿಗೆ 8ನೆ ವಿಕೆಟ್‌ಗೆ ನಿರ್ಣಾಯಕ ಜೊತೆಯಾಟ ನಡೆಸಿ ತಂಡದ ಗೆಲುವಿಗೆ ಕಾರಣವಾಗಿದ್ದ ಆಮಿರ್ ಬೆನ್ನುನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News