ಕತರ್ ವಿರುದ್ಧ ಸೋತಿರುವುದಕ್ಕೆ ತಲೆದಂಡ:ದಕ್ಷಿಣ ಕೊರಿಯಾ ಕೋಚ್ ಉಚ್ಚಾಟನೆ

Update: 2017-06-15 18:20 GMT

ಸಿಯೊಲ್, ಜೂ.15: ಕತರ್ ವಿರುದ್ಧ 2-3 ಅಂತರದಿಂದ ಸೋಲುವುದರೊಂದಿಗೆ 2018ರ ಫಿಫಾ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವ ಅವಕಾಶದಿಂದ ವಂಚಿತವಾಗುವ ಭೀತಿಯಲ್ಲಿರುವ ದಕ್ಷಿಣ ಕೊರಿಯಾದ ಕೋಚ್ ಉಲಿ ಸ್ಟೀಲೈಕ್‌ರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಲಾಗಿದೆ.

2014 ರಿಂದ ದಕ್ಷಿಣ ಕೊರಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ 62ರ ಪ್ರಾಯದ ಜರ್ಮನಿಯ ಸ್ಟೀಲೈಕ್ ಮಾರ್ಗದರ್ಶನದಲ್ಲಿ ದಕ್ಷಿಣ ಕೊರಿಯಾ ತಂಡ ಚೀನಾ, ಇರಾನ್ ಹಾಗೂ ಕತರ್ ವಿರುದ್ಧ ಸೋತಿತ್ತು. ಈ ಕಳಪೆ ಫಲಿತಾಂಶಕ್ಕೆ ಸ್ಟೀಲೈಟ್ ಬೆಲೆ ತೆರುವಂತಾಗಿದೆ.

 ಮಂಗಳವಾರ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡ ಕತರ್‌ನ ವಿರುದ್ಧ 32 ವರ್ಷಗಳ ಬಳಿಕ ಸೋಲುಂಡಿದೆ. ಈ ಸೋಲಿನಿಂದಾಗಿ 2018ರಲ್ಲಿ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ‘ಎ’ ಗುಂಪಿನಿಂದ ಇನ್ನೂ ಎರಡು ಪಂದ್ಯ ಬಾಕಿಯಿರುವಾಗಲೇ ನೇರ ಪ್ರವೇಶ ಗಿಟ್ಟಿಸಿಕೊಳ್ಳುವುದರಿಂದ ವಂಚಿತವಾಗುವ ಭೀತಿಯಲ್ಲಿದೆ.

ದಕ್ಷಿಣ ಕೊರಿಯಾದ ಕೊನೆಯ ಎರಡು ಅರ್ಹತಾ ಸುತ್ತಿನ ಪಂದ್ಯಗಳಿಗಿಂತ ಮೊದಲು ಕೊರಿಯಾ ಫುಟ್ಬಾಲ್ ಸಂಸ್ಥೆಯ(ಕೆಎಫ್‌ಎ) ಅಧ್ಯಕ್ಷ ಲೀ ಯೊಂಗ್-ಸೂ ಅವರು ರಾಜೀನಾಮೆ ನೀಡಿದ್ದಾರೆ.

 ವಿಶ್ವಕಪ್‌ನ ಅಂತಿಮ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ತಂಡದ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ. ಕೆಎಫ್‌ಎ ಕೋಚ್ ಸ್ಟೀಲೈಕ್ ಅವರ ಒಪ್ಪಂದ ಅವಧಿಯನ್ನು ಸರ್ವ ಸಮ್ಮತಿಯೊಂದಿಗೆ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಯೊಲ್‌ನಲ್ಲಿ ನಡೆದ ಸಭೆಯ ಬಳಿಕ ಲೀ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News