×
Ad

ಹಾಕಿ ವಿಶ್ವ ಲೀಗ್ ಸೆಮಿ ಫೈನಲ್ಸ್: ಭಾರತಕ್ಕೆ ಸುಲಭ ತುತ್ತಾದ ಸ್ಕಾಟ್ಲೆಂಡ್

Update: 2017-06-15 23:51 IST

ಲಂಡನ್, ಜೂ.15: ರಮನ್‌ದೀಪ್ ಸಿಂಗ್ ಬಾರಿಸಿದ ಅವಳಿ ಗೋಲಿನ ನೆರವಿನಿಂದ ಎಫ್‌ಐಎಚ್ ಹಾಕಿ ವಿಶ್ವ ಲೀಗ್ ಸೆಮಿ ಫೈನಲ್ಸ್‌ನ ಮೊದಲ ಹಂತದ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 4-1 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ.

 8 ಬಾರಿಯ ಒಲಿಂಪಿಕ್ಸ್ ಚಾಂಪಿಯನ್, ವಿಶ್ವ ರ್ಯಾಂಕಿಂಗ್‌ನಲ್ಲಿ 6ನೆ ಸ್ಥಾನದಲ್ಲಿರುವ ಭಾರತ ಗುರುವಾರ ಇಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ 23ನೆ ರ್ಯಾಂಕಿನಲ್ಲಿರುವ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ರಮನ್‌ದೀಪ್ 31ನೆ ಹಾಗೂ 34ನೆ ನಿಮಿಷದಲ್ಲಿ ಗೋಲು ಬಾರಿಸಿದರೆ, ಆಕಾಶ್ ದೀಪ್ ಸಿಂಗ್(40ನೆ ನಿಮಿಷ) ಹಾಗೂ ಹರ್ಮನ್‌ಪ್ರೀತ್ ಸಿಂಗ್(42ನೆನಿ.)ತಲಾ ಒಂದು ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ಕಾಣಿಕೆ ನೀಡಿದರು.

ಆರನೆ ನಿಮಿಷದಲ್ಲಿ ಗೋಲು ಬಾರಿಸಿದ ಕ್ರಿಸ್ ಗ್ರಾಸ್ಸಿಕ್ ಸ್ಕಾಟ್ಲೆಂಡ್‌ಗೆ ಆರಂಭದಲ್ಲೇ 1-0 ಮುನ್ನಡೆ ಒದಗಿಸಿಕೊಟ್ಟರು. 31ನೆ ನಿಮಿಷದಲ್ಲಿ ಗೋಲು ಬಾರಿಸಿದ ರಮನ್‌ದೀಪ್ ಸಿಂಗ್ ಭಾರತ 1-1 ರಿಂದ ಸಮಬಲ ಸಾಧಿಸಲು ನೆರವಾದರು. ಸಮಬಲ ಸಾಧಿಸಿದ ಬಳಿಕ ಹಿಂತಿರುಗಿ ನೋಡದ ಭಾರತ 34ನೆ, 40ನೆ ಹಾಗೂ 42ನೆ ನಿಮಿಷದಲ್ಲಿ ಗೋಲು ಬಾರಿಸಿ ಸ್ಕಾಟ್ಲೆಂಡ್‌ನ ಮೇಲೆ ಸವಾರಿ ಮಾಡಿತು.

‘ಬಿ’ ಗುಂಪಿನಲ್ಲಿರುವ ಭಾರತ ಜೂ.17ರಂದು ನಡೆಯಲಿರುವ ತನ್ನ ಎರಡನೆ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಜೂ.18 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಜೂ.20 ರಂದು ಹಾಲೆಂಡ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News