×
Ad

ಚಾಂಪಿಯನ್ ಪಟ್ಟಕ್ಕಾಗಿ ಭಾರತ-ಪಾಕಿಸ್ತಾನ ಫೈನಲ್ ಫೈಟ್

Update: 2017-06-17 23:34 IST

ಲಂಡನ್, ಜೂ.17: ಎಂಟನೆ ಆವೃತ್ತಿಯ ಚಾಂಪಿಯನ್ ಟ್ರೋಫಿ ಪಂದ್ಯದ ಫೈನಲ್‌ನಲ್ಲಿ ರವಿವಾರ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಭಾರತ ಸತತ ಎರಡನೆ ಬಾರಿ ಪ್ರಶಸ್ತಿ ಎತ್ತುವ ಕಡೆಗೆ ಪ್ರಯತ್ನ ನಡೆಸಲಿದೆ. ಆದರೆ ಪಾಕಿಸ್ತಾನ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ.

ಪಾಕಿಸ್ತಾನ ವಿರುದ್ಧ ಗೆಲುವಿನೊಂದಿಗೆ ಈ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಿದ್ದ ಭಾರತ ಇದೀಗ ಮತ್ತೆ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ.
ರಾಜಕೀಯ ಸಂಬಂಧ ಉಭಯ ದೇಶಗಳ ನಡುವೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕ್ರಿಕೆಟ್‌ನ ಫೈನಲ್ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿ ಗುರುತಿಸಿಕೊಂಡಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಬಲಿಷ್ಠವಾಗಿದ್ದರೂ, ಪಾಕಿಸ್ತಾನ ತಂಡ ಸುಲಭವಾಗಿ ಭಾರತಕ್ಕೆ ಮಣಿಯದು. ಸರ್ಫರಾಝ್ ನಾಯಕತ್ವದ ಪಾಕ್ ತಂಡ ಸೇಡು ತೀರಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ.

 ಹದಿನೆಂಟು ದಿನಗಳ ಚಾಂಪಿಯನ್ಸ್ ಟ್ರೋಫಿ ಕೂಟ ಕೊನೆಗೊಳ್ಳುತ್ತಿದ್ದು, ಚಾಂಪಿಯನ್ ಯಾರಾಗುವರೆಂಬ ಕುತೂಹಲ ಎಲ್ಲರಿಗೂ. ಜಾಗತಿಕವಾಗಿ ಫೈನಲ್ ಪಂದ್ಯ ಗಮನ ಸೆಳೆದಿದೆ.
ಪಾಕಿಸ್ತಾನ ಪಂದ್ಯ ಆರಂಭಗೊಳ್ಳುವ ಹೊತ್ತಿಗೆ ಗಾಯಾಳುಗಳ ಸಮಸ್ಯೆ ಎದುರಿಸಿತ್ತು. ಆದರೆ ಭಾರತಕ್ಕೆ ಅಂತಹ ಸಮಸ್ಯೆ ಇಲ್ಲ. ಹೀಗಿದ್ದರೂ ಅದು ಲಂಕಾದ ವಿರುದ್ಧದ ಪಂದ್ಯವನ್ನು ಲಘವಾಗಿ ಪರಿಗಣಿಸಿ ಪಂದ್ಯವನ್ನು ಕೈ ಚೆಲ್ಲಿತ್ತು.

 ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದ ಪಾಕಿಸ್ತಾನ ಅನಂತರ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕವನ್ನು ಸೋಲಿಸಿ ಸೆಮಿಫೈನಲ್ ಗೇರಿತ್ತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ತಂಡವನ್ನು ಮಣಿಸಿ ಭಾರತ ಫೈನಲ್ ತಲುಪಿದೆ. ಇದರಿಂದಾಗಿ ಪಾಕಿಸ್ತಾನ ಇದೀಗ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಫೈನಲ್‌ನಲ್ಲಿ ಎದುರಿಸುವಂತಾಗಿದೆ.

ಹಾಲಿ ಚಾಂಪಿಯನ್ ಭಾರತ ಟೂರ್ನಮೆಂಟ್ ಆರಂಭಗೊಳ್ಳುವ ಮೊದಲೇ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಇದೀಗ ತಂಡದ ಸಾಮರ್ಥ್ಯ ಕಡಿಮೆಯಾಗಿಲ್ಲ.

ಭಾರತದ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಉತ್ತಮ ಪ್ರದರ್ಶನ ನೀಡಿ ಭಾರತದ ಫೈನಲ್ ಹಾದಿಯನ್ನು ಸುಲಭಗೊಳಿಸಿದ್ದರು.ಲಂಕಾದ ವಿರುದ್ಧ ತಂಡದ ಸೋಲಿನ ಬಳಿಕ ಆಟಗಾರರ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿತ್ತು. ಆರ್.ಅಶ್ವಿನ್ ರವೀಂದ್ರ ಜಡೇಜ ಅವರು ಭಾರತದ ಬೌಲಿಂಗ್ ವಿಭಾಗವನ್ನು ಬಲಿಷ್ಠವಾಗಿ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಪ್ರದರ್ಶನ ಚೆನ್ನಾಗಿದೆ. ಕೆದಾರ್ ಜಾಧವ್ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ತಂಡಕ್ಕೆ ನೆರವಾಗಿದ್ದರು. ಅವರು ಐದನೇ ಬೌಲರ್ ಸ್ಥಾನ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಶಿಖರ್ ಧವನ್(317 ರನ್), ರೋಹಿತ್ ಶರ್ಮ(304) ಮತ್ತು ವಿರಾಟ್ ಕೊಹ್ಲಿ(253) ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಅಪಾರ ಅನುಭವಿಗಳಾದ ಮಾಜಿ ನಾಯಕ ಮಹೆಂದ್ರ ಸಿಂಗ್ ಧೋನಿ ಮತ್ತು ಆಲ್‌ರೌಂಡರ್ ಯುವರಾಜ್ ಸಿಂಗ್ ತಂಡಕ್ಕೆ ಸಮರ್ತ ಮಾರ್ಗದರ್ಶನ ನೀಡುತ್ತಿದ್ಧಾರೆ. ಇಬ್ಬರು ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಪಾಕಿಸ್ತಾನದ ಬೌಲಿಂಗ್ ವಿಭಾಗ ಯುವ ಬೌಲರ್ ಹಸನ್ ಅಲಿ ಅವರನ್ನು ಅವಲಂಭಿಸಿದೆ. ಅವರು ಉತ್ತಮ ಫಾರ್ಮ್‌ನಲ್ಲಿದ್ಧಾರೆ. ಮುಹಮ್ಮದ್ ಆಮಿರ್ ಮತ್ತು ಜುನೈದ್ ಖಾನ್ ಅಂತಿಮ ಹನ್ನೊಂದರ ಬಳಗದಲ್ಲಿದ್ದಾರೆ.
ಆಮಿರ್ ಗಾಯದಿಂದಾಗಿ ಸೆಮಿಫೈನಲ್ ಪಂದ್ಯ ಆಡಿರಲಿಲ್ಲ. ಆದರೆ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಫೈನಲ್‌ನಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಹಾಬ್ ರಿಯಾಝ್ ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ ಅವರು ಫೈನಲ್‌ಗೂ ಲಭ್ಯರಿಲ್ಲ.
ಪಾಕಿಸ್ತಾನದ ಬ್ಯಾಟಿಂಗ್ ಅಝರ್ ಅಲಿ,ಫಾಖರ್ ಝಮಾನ್,ಬಾಬರ್ ಅಝಮ್, ಅನುಭವಿಗಳಾದ ಶುಐಬ್ ಮಲಿಕ್ ಮತ್ತು ಮುಹಮ್ಮದ್ ಹಫೀಝ್ ಅವರನ್ನು ಅವಲಂಭಿಸಿದೆ.

 ಅಝರ್ ಅಲಿ ಅವರು ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದಾರೆ.ಸರ್ಫರಾಜ್ ಅಹ್ಮದ್ ತಂಡವನ್ನು ಒತ್ತಡದ ಪರಿಸ್ಥಿತಿಯಿಂದ ಪಾರು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪಾಕಿಸ್ತಾನದ ಬೌಲಿಂಗ್ ಬಲಿಷ್ಠವಾಗಿದ್ದರೂ ಬ್ಯಾಟಿಂಗ್‌ನಲ್ಲಿ ಸಮಸ್ಯೆ ಇದೆ.
 ಭಾರತ ನಾಲ್ಕನೆ ಬಾರಿ ಐಸಿಸಿ ಟೂರ್ನಮೆಂಟ್‌ನಲ್ಲಿ ಫೈನಲ್ ಪ್ರವೇಶಿಸಿದೆ.ಐಸಿಸಿ ಇವೆಂಟ್‌ನಲ್ಲಿ ಪಾಕ್ ವಿರುದ್ಧ 12-2 ಗೆಲುವಿನ ದಾಖಲೆ ಹೊಂದಿದೆ. ಭಾರತ ಹತ್ತು ವರ್ಷಗಳ ಹಿಂದೆ ಅಂದರೆ 2007ರಲ್ಲಿ ಐಸಿಸಿ ವರ್ಲ್ಡ್ ಟ್ವೆಂಟಿ 20 ಚೊಚ್ಚಲ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 5 ರನ್‌ಗಳ ರೋಚಕ ಜಯ ದಾಖಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಯುವರಾಜ್ ಸಿಂಗ್,ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ದಿನೇಶ್ ಕಾರ್ತಿಕ್, ಮುಹಮ್ಮದ್ ಶಮಿ, ಅಜಿಂಕ್ಯ ರಹಾನೆ,ಉಮೇಶ್ ಯಾದವ್.

ಪಾಕಿಸ್ತಾನ: ಸರ್ಫರಾಜ್ ಅಹ್ಮದ್(ನಾಯಕ/ವಿಕೆಟ್ ಕೀಪರ್), ಅಹ್ಮದ್ ಶಹಝಾದ್, ಅಝರ್ ಅಲಿ, ಬಾಬರ್ ಅಝಮ್, ಮುಹಮ್ಮದ್ ಹಫೀಝ್, ಶುಐಬ್ ಮಲಿಕ್, ಹಸನ್ ಅಲಿ, ಮುಹಮ್ಮದ್ ಆಮಿರ್, ರುಮಾನ್ ರೆಯಿಸ್,ಜುನೈದ್ ಖಾನ್, ಇಮಾದ್ ವಾಸಿಮ್, ಫಯೀಮ್ ಅಶ್ರಫ್, ಶದಾಬ್ ಖಾನ್, ಫಾಖರ್ ಝಮಾನ್, ಹಾರೀಸ್ ಸೊಹೈಲ್

ಪಂದ್ಯದ ಸಮಯ: ಸಂಜೆ 3:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News