×
Ad

ಐಸಿಸಿ ಏಕದಿನ ರ್ಯಾಂಕಿಂಗ್: ಪಾಕ್‌ಗೆ ಭಡ್ತಿ

Update: 2017-06-19 23:45 IST

ದುಬೈ, ಜೂ.19: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಹೀನಾಯವಾಗಿ ಸೋಲಿಸಿದ್ದ ಪಾಕಿಸ್ತಾನ ತಂಡ ಐಸಿಸಿ ಏಕದಿನ ಟೀಮ್ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಭಡ್ತಿ ಪಡೆದು ಆರನೆ ಸ್ಥಾನಕ್ಕೆ ತಲುಪಿದೆ.

ರನ್ನರ್-ಅಪ್ ಭಾರತ ತಂಡ ಮೂರನೆ ಸ್ಥಾನ ಉಳಿಸಿಕೊಂಡಿದೆ.
ಐಸಿಸಿ ರ್ಯಾಂಕಿಂಗ್‌ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶವನ್ನು ಹಿಂದಿಕ್ಕಿರುವ ಪಾಕಿಸ್ತಾನ ತಂಡ 2019ರ ವಿಶ್ವಕಪ್‌ನಲ್ಲಿ ನೇರ ಪ್ರವೇಶ ಗಿಟ್ಟಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಆತಿಥೇಯ ಇಂಗ್ಲೆಂಡ್ ಸಹಿತ ಏಳು ತಂಡಗಳು ಸೆಪ್ಟಂಬರ್ 30ರಂದು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿವೆ.
 ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರ್ಯಾಂಕಿನ ಭಾರತ ಹಾಗೂ ಇಂಗ್ಲೆಂಡ್‌ನ ವಿರುದ್ಧ ಜಯ ಸಾಧಿಸಿರುವ ಪಾಕ್ ನಾಲ್ಕಂಕವನ್ನು ಗಳಿಸಿದ್ದು,ಪಾಕ್‌ನ ಒಟ್ಟು ಅಂಕ 95ಕ್ಕೆ ತಲುಪಿದೆ.

ದಕ್ಷಿಣ ಆಫ್ರಿಕ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ರ್ಯಾಂಕಿಂಗ್‌ನಲ್ಲಿ ಬೇರ್ಯಾವುದೇ ಬದಲಾವಣೆಯಾಗಿಲ್ಲ. ಭಾರತ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಲಾ ಒಂದು ಅಂಕ ಕಳೆದುಕೊಂಡಿದೆ.

 ಏಕದಿನ ಆಟಗಾರರ ರ್ಯಾಂಕಿಂಗ್‌ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಮೂರು ಸ್ಥಾನ ಭಡ್ತಿ ಪಡೆದು 10ನೆ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಭುವನೇಶ್ವರ ಕುಮಾರ್(19ನೆ ಸ್ಥಾನ) ಹಾಗೂ ಜಸ್‌ಪ್ರಿತ್ ಬುಮ್ರಾ(24) ಕ್ರಮವಾಗಿ 4 ಹಾಗೂ 19 ಸ್ಥಾನ ಭಡ್ತಿ ಪಡೆದಿದ್ದಾರೆ.
ಪಾಕ್‌ನ ವೇಗದ ಬೌಲರ್ ಹಸನ್ ಅಲಿ ಹಾಗೂ ಆರಂಭಿಕ ಆಟಗಾರ ಫಖಾರ್ ಝಮಾನ್ ರ್ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಸಾಧಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪಡೆದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅಲಿ 12 ಸ್ಥಾನ ಮೇಲಕ್ಕೇರಿ 7ನೆ ಸ್ಥಾನಕ್ಕೆ ತಲುಪಿದ್ದಾರೆ.

ಫೈನಲ್ ಪಂದ್ಯದಲ್ಲಿ 114 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದ ಫಖಾರ್ ಝಮಾನ್ ಇದೇ ಮೊದಲ ಬಾರಿ ಅಗ್ರ-100ಕ್ಕೆ ಪ್ರವೇಶಿಸಿದ್ದಾರೆ. ನಾಲ್ಕನೆ ಏಕದಿನ ಪಂದ್ಯವನ್ನಾಡಿದ ಝಮಾನ್ 58 ಸ್ಥಾನ ಭಡ್ತಿ ಪಡೆದು 97ನೆ ಸ್ಥಾನಕ್ಕೇರಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News