×
Ad

ಭಾರತ ಎ, ಅಂಡರ್-19 ತಂಡ: ಕೋಚ್ ಆಗಿ ದ್ರಾವಿಡ್ ಮುಂದುವರಿಕೆ

Update: 2017-06-20 23:38 IST

 ಹೊಸದಿಲ್ಲಿ, ಜೂ.20: ಟೀಮ್ ಇಂಡಿಯಾದ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಯದಿರಲು ನಿರ್ಧರಿಸಿರುವ ನಡುವೆ ರಾಹುಲ್ ದ್ರಾವಿಡ್ ಅವರು ಮುಂದಿನ ಎರಡು ವರ್ಷಗಳ ಕಾಲ ಅಂಡರ್-19 ಹಾಗೂ ಭಾರತ ಎ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಐಪಿಎಲ್‌ನಲ್ಲಿ ಡೆಲ್ಲಿ ಡೆರ್ ಡೆವಿಲ್ಸ್ ತಂಡದಲ್ಲಿ ಮೆಂಟರ್(ಸಲಹೆಗಾರ) ಆಗಿಯೂ ಕಾರ್ಯನಿರ್ವಹಿಸುತ್ತಿರುವ ದ್ರಾವಿಡ್ ಎರಡು ಹುದ್ದೆಯಲ್ಲಿರುವ ಹಿನ್ನೆಲೆಯಲ್ಲಿ ಸ್ವಹಿತಾಸಕ್ತಿ ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಎರಡರಲ್ಲಿ ಒಂದು ಹುದ್ದೆ ತ್ಯಜಿಸಲು ಯೋಚಿಸುತ್ತಿದ್ದಾರೆ. ಆದರೆ, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗು ಸೌರವ್ ಗಂಗುಲಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ದ್ರಾವಿಡ್ ಇನ್ನೂ ಎರಡು ವರ್ಷ ಭಾರತ ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ಮುಂದುವರಿಯಲು ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದೆ.

ಆಡಳಿತಾಧಿಕಾರಿ ಸಮಿತಿಯ ಮಾಜಿ ಸದಸ್ಯ ರಾಮಚಂದ್ರ ಗುಹಾ ತನ್ನ ಸುದೀರ್ಘ ರಾಜೀನಾಮೆ ಪತ್ರದಲ್ಲಿ ಬಿಸಿಸಿಐನ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದು, ದ್ರಾವಿಡ್ ಎರಡು ಪ್ರಮುಖ ಹುದ್ದೆಯಲ್ಲಿರುವುದನ್ನು ಪ್ರಸ್ತಾವಿಸಿದ್ದರು.

ಗುಹಾ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ದ್ರಾವಿಡ್, ಬಿಸಿಸಿಐನ ಸ್ವಹಿತಾಸಕ್ತಿ ಸಂಘರ್ಷದ ನಿಯಮದ ವ್ಯಾಪ್ತಿಗೆ ನಾನು ಸೇರುವುದಿಲ್ಲ. ನನ್ನ ಅನುಕೂಲಕ್ಕಾಗಿ ನಿಯಮವನ್ನು ಉಲ್ಲಂಘಿಸಿದ್ದೇನೆಂದು ಟೀಕಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News