ಕರ್ನಾಟಕದ ಕ್ರಿಕೆಟ್ ನಂಟು ಕಡಿದುಕೊಂಡ ಉತ್ತಪ್ಪ

Update: 2017-06-20 18:14 GMT

ಬೆಂಗಳೂರು, ಜೂ.20: ಸುಮಾರು 15 ವರ್ಷಗಳ ಹಿಂದೆ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಕಾಲಿಟ್ಟಿರುವ ಕೊಡಗಿನ ಕುವರ ರಾಬಿನ್ ಉತ್ತಪ್ಪ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ, ನಾಯಕನಾಗಿ, ವಿಕೆಟ್‌ಕೀಪರ್ ಆಗಿ ಆಡಿದ್ದಾರೆ.

2002-03ರ ಋತುವಿನಲ್ಲಿ ಕರ್ನಾಟಕದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಉತ್ತಪ್ಪ ಈ ವರ್ಷ ಮತ್ತೊಂದು ರಾಜ್ಯದ ಪರ ಹೊಸ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದಾರೆ.

ಕರ್ನಾಟಕದ ಹಲವು ಐತಿಹಾಸಿಕ ಗೆಲುವು ಹಾಗೂ ಸೋಲಿನ ಭಾಗವಾಗಿದ್ದ ಉತ್ತಪ್ಪಗೆ ಬೇರೊಂದು ರಾಜ್ಯದ ಪರ ಆಡಲು ಕರ್ನಾಟಕದ ಕ್ರಿಕೆಟ್ ಸಂಸ್ಥೆ ಶನಿವಾರ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಿದೆ. ಪ್ರಸ್ತುತ ವಿದೇಶದಲ್ಲಿ ರಜೆ ಮೇಲೆ ತೆರಳಿರುವ ಉತ್ತಪ್ಪ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉತ್ತಪ್ಪ ಈ ವರ್ಷ ಕೇರಳ ತಂಡದಲ್ಲಿ ಆಡಲಿದ್ದಾರೆಂಬ ಬಗ್ಗೆ ವದಂತಿ ಹಬ್ಬಿದೆ.

 ಕರ್ನಾಟಕ ತಂಡದಿಂದ ಉತ್ತಪ್ಪ ನಿರ್ಗಮಿಸುವುದನ್ನು ದೃಢಪಡಿಸಿದ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್ ರಾವ್, ನಾನು ಅವರೊಂದಿಗೆ ದೀರ್ಘಕಾಲ ಚರ್ಚಿಸಿದ್ದು, ಅವರು ಕರ್ನಾಟಕ ತಂಡ ತೊರೆಯಲು ತನ್ನದೇ ಆದ ಕಾರಣ ನೀಡಿದರು. ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೇವೆ. ಅವರು ಕರ್ನಾಟಕದ ಕ್ರಿಕೆಟ್‌ಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.

15 ವರ್ಷಗಳ ಹಿಂದೆ ಜೆ.ಅರುಣ್ ಕುಮಾರ್ ಬದಲಿಗೆ ಕರ್ನಾಟಕ ತಂಡ ಪ್ರವೇಶಿಸಿದ್ದ ಉತ್ತಪ್ಪ 2014-15ರ ಋತುವಿನಲ್ಲಿ ಕರ್ನಾಟಕ ಅತ್ಯುತ್ತಮ ಪ್ರದರ್ಶನ ನೀಡಲು ಮಹತ್ವದ ಪಾತ್ರನಿರ್ವಹಿಸಿದ್ದರು.

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಉತ್ತಪ್ಪ ಕರ್ನಾಟಕದ ಪರ 101 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 18 ಶತಕಗಳು ಹಾಗೂ 33 ಅರ್ಧಶತಕಗಳ ಸಹಿತ ಒಟ್ಟು 6,865 ರನ್ ಗಳಿಸಿದ್ದರು. ಉತ್ತಪ್ಪ ರನ್ ಮಾತ್ರವಲ್ಲ ಉತ್ತಮ ಫೀಲ್ಡಿಂಗ್‌ನ ಮೂಲಕ 102 ಕ್ಯಾಚ್‌ಗಳನ್ನು ಪಡೆದಿದ್ದಾರೆ. 2015-16ರಲ್ಲಿ ಸಿಎಂ ಗೌತಮ್‌ರೊಂದಿಗೆ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ಹಂಚಿಕೊಂಡಿದ್ದರು. ಈ ನಿರ್ಧಾರ ಅವರಿಗೆ ಹಾಗೂ ತಂಡಕ್ಕೆ ಪ್ರಯೋಜನವಾಗಿರಲಿಲ್ಲ.

ಕಳೆದ ವರ್ಷ ರಣಜಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಸೋತು ಹೊರ ನಡೆದಿತ್ತು. ಉತ್ತಪ್ಪ 7 ಇನಿಂಗ್ಸ್‌ಗಳಲ್ಲಿ ಒಂದು ಶತಕ(128) ಸಹಿತ 328 ರನ್ ಗಳಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News