ಆಸ್ಟ್ರೇಲಿಯ ಓಪನ್ ಬ್ಯಾಡ್ಮಿಂಟನ್: ಪ್ರಧಾನ ಸುತ್ತಿಗೆ ಕಶ್ಯಪ್, ಸಿರಿಲ್

Update: 2017-06-20 18:26 GMT

ಸಿಡ್ನಿ, ಜೂ.20: ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯ ಅರ್ಹತಾ ಸುತ್ತಿನಲ್ಲಿ ಆಡಿದ ನಾಲ್ವರು ಶ್ರೇಯಾಂಕರಹಿತ ಬ್ಯಾಡ್ಮಿಂಟನ್ ಆಟಗಾರರ ಪೈಕಿ ಮೂವರು ಪ್ರಧಾನಸುತ್ತಿಗೆ ತೇರ್ಗಡೆಯಾಗಿದ್ದಾರೆ.

 ಸೋಮವಾರ ಇಲ್ಲಿನ ಸಿಡ್ನಿ ಒಲಿಂಪಿಕ್ಸ್‌ಪಾರ್ಕ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಬಿಡಬ್ಲುಎಫ್ ಪುರುಷರ ರ್ಯಾಂಕಿಂಗ್‌ನಲ್ಲಿ 69ನೆ ಸ್ಥಾನದಲ್ಲಿರುವ ಪಾರುಪಲ್ಲಿ ಕಶ್ಯಪ್ ಚೀನಾದ ಝಾವೊ ಜುನ್‌ಪೆಂಗ್‌ರನ್ನು 21-15, 21-18 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಎರಡನೆ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕಝುಮಸಾ ಸಕೈರನ್ನು 21-5, 21-16 ಗೇಮ್‌ಗಳ ಅಂತರದಿಂದ ಸೋಲಿಸಿದ ಕಶ್ಯಪ್ ಟೂರ್ನಿಯ ಪ್ರಧಾನ ಸುತ್ತಿಗೇರಿದರು.

ಯುವ ಆಟಗಾರ ಸಿರಿಲ್ ವರ್ಮ ಇಂಡೋನೇಷ್ಯಾದ ಯೆಹೆಕೀ ಫ್ರಿಟ್ಝ್‌ರನ್ನು 21-9, 21-9 ಗೇಮ್‌ಗಳಿಂದಲೂ, ಸಹ ಆಟಗಾರ ಶ್ರೇಯಾಂಶು ಜೈಸ್ವಾಲ್‌ರನ್ನು 21-16, 21-14 ಗೇಮ್‌ಗಳ ಅಂತರದಿಂದ ಮಣಿಸಿ ಪ್ರಮುಖ ಸುತ್ತಿಗೇರಿದ್ದಾರೆ.

ಮಹಿಳೆಯರ ಸಿಂಗಲ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ರುಥ್ವಿಕಾ ಶಿವಾನಿ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಸಿಲ್ವಿನಾ ಕುರ್ನಿಯವಾನ್‌ರನ್ನು 21-15, 21-15 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ರುವಿಂಡಿ ಸೆರಾಸಿಂೆ ಅವರನ್ನು 21-9, 21-7 ಗೇಮ್‌ಗಳಿಂದ ಸೋಲಿಸಿದ್ದಾರೆ.

 ಭಾರತದ ಹೆಚ್ಚಿನ ಅಗ್ರಮಾನ್ಯ ಬ್ಯಾಡ್ಮಿಂಟನ ಆಟಗಾರರು ಈಗಾಗಲೇ ಪ್ರಧಾನ ಸುತ್ತಿಗೆ ತಲುಪಿದ್ದಾರೆ. ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಎಚ್‌ಎಸ್ ಪ್ರಣಯ್ ಮೊದಲಸುತ್ತಿನಲ್ಲಿ ಇಂಗ್ಲೆಂಡ್‌ನ ರಾಜೀವ್ ಒಸೆಫ್‌ರನ್ನು ಎದುರಿಸಲಿದ್ದಾರೆ.

ಇಂಡೋನೇಷ್ಯಾ ಓಪನ್ ಚಾಂಪಿಯನ್ ಕೆ.ಶ್ರೀಕಾಂತ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕ್ಯಾನ್‌ಚಾವೊ ಯೂ ಅವರನ್ನು ಎದುರಿಸಲಿದ್ದಾರೆ.

ಅಜಯ್ ಜಯರಾಮ್ ಹಾಗೂ ಸಾಯಿ ಪ್ರಣೀತ್ ಅವರು ಕ್ರಮವಾಗಿ ಕಾ ಲಾಂಗ್ ಅಂಗುಸ್ ಹಾಗೂ ಟ್ಯಾಮಿ ಸುಗಿಯಾಟೊರನ್ನು ಎದುರಿಸಲಿದ್ದಾರೆ.

ಸೈನಾ ನೆಹ್ವಾಲ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಸಂಗ್ ಜಿ ಹ್ಯೂನ್‌ರನ್ನು ಎದುರಿಸಲಿದ್ದಾರೆ. ಪಿ.ವಿ.ಸಿಂಧು ಅವರು ಇಂಡೋನೇಷ್ಯಾ ಚಾಂಪಿಯನ್ ಸಯಾಕಾ ಸೊಟೊರನ್ನು ಮುಖಾಮುಖಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News