ಆಸ್ಟ್ರೇಲಿಯನ್ ಓಪನ್: ಸಿಂಧು, ಸೈನಾ, ಶ್ರೀಕಾಂತ್ ಶುಭಾರಂಭ

Update: 2017-06-21 18:19 GMT

ಸಿಡ್ನಿ, ಜೂ.21: ಇಂಡೋನೇಷ್ಯಾ ಓಪನ್‌ನ ನೂತನ ಚಾಂಪಿಯನ್ ಕೆ. ಶ್ರೀಕಾಂತ್, ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಆಸ್ಟ್ರೇಲಿಯನ್ ಸೂಪರ್ ಸರಣಿಯಲ್ಲಿ ಶುಭಾರಂಭ ಮಾಡಿದ್ದಾರೆ.

 ಬುಧವಾರ ಇಲ್ಲಿ ಆರಂಭವಾದ ಟೂರ್ನಿಯಲ್ಲಿ ಸಿಂಗಾಪುರ ಓಪನ್ ಚಾಂಪಿಯನ್ ಬಿ.ಸಾಯಿ ಪ್ರಣೀತ್ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದು, ದೈತ್ಯ ಸಂಹಾರಿ ಖ್ಯಾತಿಯ ಎಚ್.ಎಸ್. ಪ್ರಣಯ್, ಕಶ್ಯಪ್ ಸಹಿತ ಇತರ ನಾಲ್ವರು ಸಿಂಗಲ್ಸ್ ಆಟಗಾರರ ಸವಾಲು ಅಂತ್ಯಗೊಂಡಿದೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದ ಶ್ರೀಕಾಂತ್ ಚೈನೀಸ್ ತೈಪೆಯ ಕಾನ್ ಚಾವೊ ಯೂ ಅವರನ್ನು 21-13, 21-16 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

 ಇಂಡೋನೇಷ್ಯಾದ ಟ್ಯಾಮಿ ಸುಗಿಯಾರ್ಟೊ ವಿರುದ್ಧ 10-21,21-12, 21-10 ಗೇಮ್‌ಗಳ ಅಂತರದಿಂದ ಮಣಿಸಿದ ಸಾಯಿ ಪ್ರಣೀತ್ ವೀರೋಚಿತ ಜಯ ದಾಖಲಿಸಿದರು.

ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಕೊರಿಯಾ ಆಟಗಾರ ಸನ್ ವಾನ್ ಹೊರನ್ನು ಎದುರಿಸಿದರೆ, ಸಾಯಿ ಪ್ರಣೀತ್ ಅವರು ಚೀನಾದ ಹ್ಯೂಯಾಂಗ್ ಯೂಕ್ಸಿಯಾಂಗ್‌ರನ್ನು ಎದುರಿಸಲಿದ್ದಾರೆ.

ಸೈನಾ-ಸಿಂಧು ಕಮಾಲ್:

ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸೈನಾ ಕೊರಿಯದ ನಾಲ್ಕನೆ ಶ್ರೇಯಾಂಕದ ಸನ್ ಜಿ ಹ್ಯೂನ್ ವಿರುದ್ಧ 21-10, 21-16 ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಗಮನ ಸೆಳೆದರು.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಸೋನಿಯಾ ಚಿಯಾರನ್ನು ಎದುರಿಸಲಿದ್ದಾರೆ.

ಒಂದು ಗಂಟೆ, ಐದು ನಿಮಿಷಗಳ ಕಾಲ ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಅವರು ಇಂಡೋನೇಷ್ಯಾ ಸೂಪರ್ ಸರಣಿಯ ಚಾಂಪಿಯನ್ ಜಪಾನ್‌ನ ಸಯಾಕಾ ಸಾಟೊರನ್ನು 21-17, 14-21, 21-18 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಐದನೆ ಶ್ರೇಯಾಂಕದ ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ಚೆನ್ ಕ್ಸಿಯಾಕ್ಸಿನ್‌ರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಚೆನ್ ಭಾರತದ ಋತ್ವಿಕಾ ಶಿವಾನಿಯವರನ್ನು 17-21, 21-12, 12-21 ಅಂತರದಿಂದ ಸೋಲಿಸಿದ್ದರು.

ಅಶ್ವಿನಿ-ಸಿಕ್ಕಿ ಜಯಭೇರಿ:

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಆಸ್ಟ್ರೀಯದ ಸುಯಾನ್-ಯೂ ವೆಂಡಿ ಚೆನ್ ಹಾಗೂ ಜೆನ್ನಿಫೆರ್ ಟ್ಯಾಮ್‌ರನ್ನು 21-11, 21-13 ಗೇಮ್‌ಗಳ ಅಂತರದಿಂದ ಮಣಿಸಿ ಎರಡನೆ ಸುತ್ತಿಗೇರಿದ್ದಾರೆ.

ಭಾರತ ಯುವ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಣಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಹಾಂಕಾಂಗ್‌ನ ಲಾಚೆವುಕ್ ಹಾಗೂ ಲೀ ಚುನ್ ಹೀ ಅವರನ್ನು 20-22, 21-19, 21-11 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಪ್ರಣಯ್, ಅಜಯ್ ಜಯರಾಮ್, ಪಿ.ಕಶ್ಯಪ್ ಹಾಗೂ ಸಿರಿಲ್ ವರ್ಮ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.

ಜಯರಾಮ್ ಹಾಂಕಾಂಗ್‌ನ ಕಾ ಲಾಂಗ್ ವಿರುದ್ಧ 14-21, 21-10, 21-9 ಅಂತರದಿಂದ ಸೋತಿದ್ದಾರೆ. ಗಾಯದ ಸಮಸ್ಯೆಯಿಂದ ವಾಪಸಾಗಿರುವ ಕಶ್ಯಪ್ ಕೊರಿಯಾದ ಸನ್ ವಾನ್ ಹೊ ವಿರುದ್ಧ 21-18, 14-21, 21-15 ಗೇಮ್‌ಗಳ ಅಂತರದಿಂದ ಶರಣಾಗಿದ್ದಾರೆ.

  ಪ್ರಣಯ್ ಇಂಗ್ಲೆಂಡ್‌ನ ರಾಜೀವ್ ಒಸೆಫ್ ವಿರುದ್ಧ 19-21, 13-21 ಗೇಮ್‌ಗಳಿಂದಲೂ, ಸಿರಿಲ್ ವರ್ಮ ಡೆನ್ಮಾರ್ಕ್‌ನ ಹ್ಯಾನ್ಸ್-ಕ್ರಿಸ್ಟಿಯನ್ ವಿರುದ್ಧ 16-21, 8-21 ಅಂತರದಿಂದ ಸೋತಿದ್ದಾರೆ.

ಭಾರತ ಪುರುಷರ ಹಾಗೂ ಮಹಿಳೆಯರ ಡಬಲ್ಸ್‌ನಲ್ಲಿ ಕಳಪೆ ಫಲಿತಾಂಶ ದಾಖಲಿಸಿತು.

ಪುರುಷರ ಡಬಲ್ಸ್ ಜೋಡಿ ಫ್ರಾನ್ಸಿಸ್ ಅಲ್ವಿನ್ ಹಾಗೂ ತರುಣ್ ಕೋನಾ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾ-ಮಲೇಷ್ಯಾದ ಹೆಂಡ್ರಾ ಸೆಟಿಯವಾನ್ ಹಾಗೂ ಬೂನ್ ತಾನ್ ವಿರುದ್ಧ 17-21,15-21 ರಿಂದ ಶರಣಾದರು.

 ಮಹಿಳೆಯರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಜಪಾನ್‌ನ ತಕೇಶಿ ಕಮುರಾ ಹಾಗೂ ಕೆಗೊ ಸೊನೊಡೊ ವಿರುದ್ಧ 13-21, 17-21 ರಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News