ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಪಾಕಿಸ್ತಾನ ಭಾಗವಹಿಸುವುದು ಅನುಮಾನ

Update: 2017-06-21 18:22 GMT

ಹೊಸದಿಲ್ಲಿ, ಜೂ.21: ಭುವನೇಶ್ವರದಲ್ಲಿ ಜು.6 ರಿಂದ 9ರ ತನಕ ನಡೆಯಲಿರುವ ಏಷ್ಯನ್ ಅಥ್ಲೆಟಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವುದು ಅನುಮಾನ. ಪಾಕ್ ಅಥ್ಲೀಟ್‌ಗಳಿಗೆ ಕೇಂದ್ರ ಸರಕಾರ ಇನ್ನೂ ವೀಸಾ ನೀಡದಿರುವುದೇ ಇದಕ್ಕೆ ಕಾರಣ.

ಅಥ್ಲೀಟ್‌ಗಳಿಗೆ ಅಂತಿಮ ಪ್ರವೇಶಾತಿಗೆ ಮಂಗಳವಾರ ಕೊನೆಗೊಂಡಿದ್ದು, ನೆರೆ ರಾಷ್ಟ್ರಗಳ ಅಥ್ಲೀಟ್‌ಗಳು ಇನ್ನು ಕೆಲವೇ ದಿನಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ. ಆದರೆ, ಭಾರತೀಯ ಸರಕಾರ ಪಾಕಿಸ್ತಾನಿ ಅಥ್ಲೀಟ್‌ಗಳಿಗೆ ಇನ್ನೂ ವೀಸಾವನ್ನು ಮಂಜೂರು ಮಾಡಿಲ್ಲ.

ನಾವು ಪಾಕಿಸ್ತಾನವನ್ನು ಚಾಂಪಿಯನ್‌ಶಿಪ್‌ಗೆ ಆಹ್ವಾನಿಸಿದ್ದೇವೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಶಿಷ್ಟಾಚಾರದ ಪ್ರಕಾರ ನಾವು ಎಲ್ಲ ದೇಶಗಳಿಗೆ ಆಹ್ವಾನಪತ್ರ ಕಳುಹಿಸಬೇಕು. ಪಾಕಿಸ್ತಾನವು ತನ್ನ ಪ್ರವೇಶಪತ್ರ ನೀಡಿದ್ದು ನಾವು ಅಥ್ಲೀಟ್‌ಗಳ ಹೆಸರನ್ನು ಹಾಗೂ ಅವರ ಪಾಸ್‌ಪೋರ್ಟ್‌ಗಳನ್ನು ಸರಕಾರಕ್ಕೆ ನೀಡಿದ್ದೇವೆ. ನಾವು ಸರಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್‌ನ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಹೇಳಿದ್ದಾರೆ.

ಎರಡೂ ನೆರೆಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಚೆನ್ನೈನಲ್ಲಿ ಕಳೆದ ತಿಂಗಳು ನಡೆದಿದ್ದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಆಡಿಲ್ಲ.

ಭುವನೇಶ್ವರದ ನವೀಕರಣಗೊಂಡ ಕಳಿಂಗ ಸ್ಟೇಡಿಯಂನಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ 45 ದೇಶಗಳ 800ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸಲಿದ್ದು, ಇದೊಂದು ದೊಡ್ಡ ಏಷ್ಯನ್ ಚಾಂಪಿಯನ್‌ಶಿಪ್ ಎನಿಸಿಕೊಂಡಿದೆ. ಭಾರತ ಮೂರನೆ ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ವಹಿಸಿಕೊಂಡಿದೆ. ಈ ಮೊದಲು ಹೊಸದಿಲ್ಲಿ(1989) ಹಾಗೂ ಪುಣೆ(2013)ಯಲ್ಲಿ ಟೂರ್ನಿಯನ್ನು ಆಯೋಜಿಸಿತ್ತು.

ಚಾಂಪಿಯನ್‌ಶಿಪ್‌ನ 42 ಸ್ಪರ್ಧೆಗಳಲ್ಲಿ ಚಿನ್ನದ ಪದಕ ವಿಜೇತರು ಲಂಡನ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನೇರ ಪ್ರವೇಶ ಪಡೆಯಲಿದ್ದಾರೆ.

ಭಾರತ ಗರಿಷ್ಠ 168 ಅಥ್ಲೀಟ್‌ಗಳನ್ನು ಸ್ಪರ್ಧೆಗಿಳಿಸಲಿದ್ದು, ಚೀನಾ 96 ಹಾಗೂ ಜಪಾನ್ 78 ಅಥ್ಲೀಟ್‌ಗಳನ್ನು ಕಳುಹಿಸಿಕೊಡಲಿವೆ. ಭಾರತ ಮುಂದಿನ ವಾರ ಅಥ್ಲೀಟ್‌ಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News