ಶ್ರೀಲಂಕಾ ಪ್ರವಾಸಕ್ಕಿಂತ ಮೊದಲು ಕೋಚ್ ಆಯ್ಕೆ:ಬಿಸಿಸಿಐ

Update: 2017-06-21 18:26 GMT

ಹೊಸದಿಲ್ಲಿ, ಜೂ.21: ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಪ್ರವಾಸಕ್ಕಿಂತ ಮೊದಲು ಭಾರತ ಕ್ರಿಕೆಟ್ ತಂಡಕ್ಕೆ ನೂತನ ಕೋಚ್‌ರನ್ನು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಬುಧವಾರ ಸ್ಪಷ್ಟಪಡಿಸಿದೆ.

 ಭಾರತ ತಂಡ ಮುಂದಿನ ತಿಂಗಳು ಶ್ರೀಲಂಕಾಕ್ಕೆ ಪ್ರವಾಸಕೈಗೊಳ್ಳುವ ಮೊದಲೇ ನೂತನ ಮುಖ್ಯ ಕೋಚ್‌ರನ್ನು ಆಯ್ಕೆ ಮಾಡಲಾಗುವುದು. ನೂತನ ಕೋಚ್ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ತನಕ ತಂಡದಲ್ಲಿರುತ್ತಾರೆ ಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಹೇಳಿದ್ದಾರೆ.

ಭಾರತದ ನಾಯಕ ಹಾಗೂ ಕೋಚ್ ನಡುವೆ ಉದ್ಬವಿಸಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡಲಾಗಿತ್ತು. ಹಂಗಾಮಿ ಕಾರ್ಯದರ್ಶಿ, ಸಿಇಒಗಳು ಕುಂಬ್ಳೆ ಹಾಗೂ ಕೊಹ್ಲಿ ಅವರೊಂದಿಗೆ ವಿವರವಾಗಿ ಚರ್ಚಿಸಿದ್ದರು. ಕ್ರಿಕೆಟ್ ಮಂಡಳಿಯು ಸಿಒಎ ಅಧ್ಯಕ್ಷರಾದ ವಿನೋದ್ ರಾಯ್‌ರನ್ನು ಸಂಪರ್ಕಿಸಿತ್ತು. ಸಿಇಒ ಕೂಡ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದ್ದರು. ಆದರೆ, ಯಾವುದೇ ಫಲಕಾರಿಯಾಗಲಿಲ್ಲ. ಕೊಹ್ಲಿ ಮಾತ್ರ ಕುಂಬ್ಳೆ ಕೋಚ್ ಆಗಿ ಮುಂದುವರಿಯುವುದನ್ನು ವಿರೋಧಿಸಿದ್ದರು ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News