ಹಾಕಿ ವಿಶ್ವ ಲೀಗ್ ಸೆಮಿಫೈನಲ್: ಮಲೇಷ್ಯಾಕ್ಕೆ ಸೋತ ಭಾರತ

Update: 2017-06-22 18:01 GMT

ಲಂಡನ್, ಜೂ.22: ಹಾಕಿ ವಿಶ್ವ ಲೀಗ್ ಸೆಮಿ ಫೈನಲ್‌ನಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾದ ವಿರುದ್ಧ 2-3 ಅಂತರದಿಂದ ಸೋತು ಆಘಾತ ಅನುಭವಿಸಿದೆ.

ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದ್ದು, ಭಾರತ ಮೊದಲ 20 ನಿಮಿಷದಾಟದಲ್ಲಿ ಕಳಪೆ ಪ್ರದರ್ಶನ ನೀಡಿದ್ದು ದುಬಾರಿಯಾಯಿತು. ಭಾರತ ಎದುರಾಳಿ ತಂಡಕ್ಕೆ 7 ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದ್ದು ಮಲೇಷ್ಯಾದ ರಝಿ ರಹೀಂ(19ನೆ, 48ನೆ ನಿಮಿಷ) ಹಾಗೂ ತಾಜುದ್ದೀನ್(20ನೆ ನಿ.) ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಭಾರತದ ಪರ ರಮಣ್‌ದೀಪ್ ಸಿಂಗ್(24ನೆ, 26ನೆ ನಿಮಿಷ) ಅವಳಿ ಗೋಲು ಬಾರಿಸಿದರು.

 ಈ ಗೆಲುವಿನ ಮೂಲಕ ಮಲೇಷ್ಯಾ ತಂಡ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಭಾರತ 2 ತಿಂಗಳೊಳಗೆ ಎರಡನೆ ಬಾರಿ ಮಲೇಷ್ಯಾಕ್ಕೆ ಸೋತಿದೆ. ಕಳೆದ ತಿಂಗಳು ಅಝ್ಲೆನ್ ಶಾ ಹಾಕಿ ಕಪ್‌ನಲ್ಲಿ ಮಲೇಷ್ಯಾ ವಿರುದ್ಧ 0-1 ಅಂತರದಿಂದ ಸೋತಿತ್ತು.

ಮಲೇಷ್ಯಾ ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ತಂಡ ಅರ್ಜೆಂಟೀನವನ್ನು ಎದುರಿಸಲಿದೆ. ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನ ತಂಡ ಪಾಕ್‌ನ್ನು ಮಣಿಸಿತ್ತು.

 ಮಲೇಷ್ಯಾ 19ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿತು. 20ನೆ ನಿಮಿಷದಲ್ಲಿ ಮುನ್ನಡೆಯನ್ನು 2-0ಗೇರಿಸಿತು. 2 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿದ ರಮಣ್‌ದೀಪ್ ಸ್ಕೋರನ್ನು 2-2 ರಿಂದ ಸಮಬಲಗೊಳಿಸಿದ್ದರು. ಭಾರತಕ್ಕೆ ಸತತ ಪೆನಾಲ್ಟಿ ಅವಕಾಶ ಲಭಿಸಿದ್ದರೂ ಹರ್ಮನ್‌ಪ್ರೀತ್ ಸಿಂಗ್ ಮತ್ತೊಮ್ಮೆ ವಿಫಲರಾದರು. 48ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ರಹೀಂ ಮಲೇಷ್ಯಾಕ್ಕೆ ರೋಚಕ ಜಯ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News