ನಾಳೆ ಭಾರತ-ವಿಂಡೀಸ್ ಮೊದಲ ಏಕದಿನ ಪಂದ್ಯ

Update: 2017-06-22 18:04 GMT

ಪೋರ್ಟ್ ಆಫ್ ಸ್ಪೇನ್, ಜೂ.22: ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಕ್ವೀನ್ಸ್‌ಪಾರ್ಕ್ ಓವಲ್‌ನಲ್ಲಿ ಶುಕ್ರವಾರ ನಡೆಯಲಿದೆ.

 ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕೆ ಮೊದಲ ಸವಾಲು ಎದುರಾಗಿದೆ.

ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಟೀಮ್ ಇಂಡಿಯಾ ಮತ್ತೆ ಕೋಚ್ ಇಲ್ಲದಂತಾಗಿದೆ. ನಾಯಕ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕುಂಬ್ಳೆ ಸ್ಥಾನ ಕಳೆದುಕೊಂಡಿದ್ಧಾರೆ.

ಕುಂಬ್ಳೆ ಕೋಚ್ ಅಧಿಕಾರದಲ್ಲಿ ಒಂದು ವರ್ಷ ಪೂರ್ಣಗೊಳಿಸುವ ಮೊದಲೇ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.ಚಾಂಪಿಯನ್ಸ್ ಟ್ರೋಫಿ ಮುಗಿದ ಬೆನ್ನಲ್ಲೇ ಕುಂಬ್ಳೆ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

 ಇತ್ತೀಚೆಗೆ ಕೊನೆಗೊಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತು ನಿರ್ಗಮಿಸಿತ್ತು.ಬಳಿಕ ಭಾರತ ಮೊದಲ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳುತ್ತಿದೆ. ವೆಸ್ಟ್‌ಇಂಡೀಸ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಪಡೆದಿರಲಿಲ್ಲ.

ಜೇಸನ್ ಹೋಲ್ಡರ್ ನೇತೃತ್ವದ ವೆಸ್ಟ್‌ಇಂಡೀಸ್ ತಂಡ ಅಫ್ಘಾನಿಸ್ತಾನ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ 1-1 ಸರಣಿ ಸಮಗೊಳಿಸಿ ಭಾರತದ ವಿರುದ್ಧ ಸವಾಲು ಎದುರಿಸಲು ಸಜ್ಜಾಗಿದೆ.

ಕುಂಬ್ಳೆ ನಡುವಿನ ವಿವಾದದಲ್ಲಿ ಬಿಸಿಸಿಐ ಹಿರಿಯ ಅಧಿಕಾರಿಗಳು ಕುಂಬ್ಳೆ ಪರ ಇದ್ದಾರೆ ಎನ್ನುವ ವಿಚಾರ ಕೊಹ್ಲಿಗೆ ಚೆನ್ನಾಗಿ ಗೊತ್ತಿದೆ. ಕೊಹ್ಲಿಗೆ ವಿಂಡೀಸ್ ವಿರುದ್ಧದ ಸರಣಿ ಅಷ್ಟೇನೂ ಕಠಿಣ ಸರಣಿ ಅಲ್ಲ. ಅವರೂ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಕಡೆಗೆ ನೋಡುತ್ತಿದ್ದಾರೆ.

 ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯು ಕಳೆದ ಚಾಂಪಿಯನ್ ಟ್ರೋಫಿಯಲ್ಲಿ ಅವಕಾಶ ವಂಚಿತ ಆಟಗಾರರಿಗೆ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರೆಯಲಿದೆ.ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮುಹಮ್ಮದ್ ಶಮಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರಲಿಲ್ಲ.ಅವರು ಆಡುವುದನ್ನು ನಿರೀಕ್ಷಿಸಲಾಗಿದೆ.

ಶಮಿ 2015ರ ವಿಶ್ವಕಪ್ ಸೆಮಿಫೈನಲ್‌ಬಳಿಕ ಯಾವುದೇ ಸರಣಿಯಲ್ಲಿ ಆಡಿರಲಿಲ್ಲ.ಶಮಿಗೆ ವಿಂಡೀಸ್ ಸರಣಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ತಂಡದಲ್ಲಿ ಸ್ಥಾನವನ್ನು ದೃಢಪಡಿಸಲು ಅವಕಾಶ ದೊರೆಯಲಿದೆ.

    ರೋಹಿತ್ ಶರ್ಮ ವಿಂಡೀಸ್ ವಿರುದ್ಧದ ಸರಣಿಯಿಂದ ದೂರ ಉಳಿಯಲಿದ್ದಾರೆ. ಅವರ ಬದಲಿಗೆ ಅಜಿಂಕ್ಯ ರಹಾನೆಗೆ ಮತ್ತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಅವಕಾಶ ದೊರೆಯುವ ಸಾಧ್ಯತೆ ಇದೆ. ಯುವ ಆಟಗಾರ ರಿಷಭ್ ಪಂತ್ ಅವಕಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕುಲದೀಪ್ ಯಾದವ್ ಅವರು ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಇವರಲ್ಲಿ ಯಾರಾದರೂ ಒಬ್ಬರ ಸ್ಥಾನದಲ್ಲಿ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅಶ್ವಿನ್ ಮತ್ತು ಜಡೇಜ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ.

ಭಾರತ : ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಉಮೇಶ್ ಯಾದವ್.

ವೆಸ್ಟ್‌ಇಂಡೀಸ್ : ಜೇಸನ್ ಹೋಲ್ಡರ್(ನಾಯಕ), ಜೋನಾಥನ್ ಕಾರ್ಟೆರ್, ಮಿಗ್ಯುಲ್ ಕಮಿನ್ಸ್ , ಅಲ್ಝಾರಿ ಜೋಸೆಫ್,್ ಜೇಸನ್ ಮುಹಮ್ಮದ್, ಕೀರನ್ ಪೊಲಾರ್ಡ್, ಕೆಸ್ರಿಕ್ ವಿಲಿಯಮ್ಸ್, ದೇವೇಂದ್ರ ಬಿಶೂ, ರೋಸ್ಟನ್ ಚೇಸ್, ಶಾಯ್ ಹೊಪೆ(ವಿಕೆಟ್ ಕೀಪರ್), ಎವಿನ್ ಲೂವಿಸ್, ಆಶ್ಲೇ ನರ್ಸ್, ರಾವ್‌ಮಾನ್ ಪೊವೆಲ್.

ಪಂದ್ಯದ ಸಮಯ: ಸಂಜೆ 6:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News