ಮೊದಲ ಟ್ವೆಂಟಿ-20: ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ ಜಯಭೇರಿ

Update: 2017-06-22 18:05 GMT

ಸೌತಾಂಪ್ಟನ್, ಜೂ.21: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೊವ್(ಅಜೇಯ 60) ಹಾಗೂ ಹೇಲ್ಸ್(47) ಎರಡನೆ ವಿಕೆಟ್‌ಗೆ ಸೇರಿಸಿದ 98 ರನ್ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ಆತಿಥೇಯ ತಂಡ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕ ತಂಡ ನಾಯಕ ಎಬಿಡಿವಿಲಿಯರ್ಸ್(ಅಜೇಯ 65) ಹಾಗೂ ಬೆಹರ್ದಿನ್(ಅಜೇಯ 64) ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿತ್ತು.

 ಗೆಲ್ಲಲು ಸುಲಭ ಸವಾಲು ಪಡೆದ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಜೇಸನ್ ರಾಯ್(28) ಹಾಗೂ ಹೇಲ್ಸ್(47, 38 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಬೈರ್‌ಸ್ಟೋವ್(ಅಜೇಯ 60, 35 ಎಸೆತ, 6 ಬೌಂಡರಿ, 2 ಸಿಕ್ಸರ್) ಆಂಗ್ಲರಿಗೆ ಸುಲಭ ಗೆಲುವು ತಂದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ತಂಡ ಎರಡನೆ ಓವರ್‌ನಲ್ಲಿ 7 ರನ್‌ಗೆ ಎರಡು ವಿಕೆಟ್‌ನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು.

ಆರಂಭಿಕ ಆಟಗಾರರಾದ ಸ್ಮಟ್ಸ್(0) ಹಾಗೂ ಹೆಂಡ್ರಿಕ್ಸ್(3) ಬೇಗನೆ ವಿಕೆಟ್ ಒಪ್ಪಿಸಿದರು. ಡೇವಿಡ್ ಮಿಲ್ಲರ್(9) ಔಟಾದಾಗ ತಂಡದ ಮೊತ್ತ 3 ವಿಕೆಟ್‌ಗೆ 32.

ಆಗ ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 110 ರನ್ ಸೇರಿಸಿದ ಡಿವಿಲಿಯರ್ಸ್(ಅಜೇಯ 65, 58 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಬೆಹಾರ್ದಿನ್(ಅಜೇಯ 64, 52 ಎಸೆತ, 4 ಬೌಂಡರಿ, 2 ಸಿಕ್ಸರ್) ತಂಡ ಗೌರವಾರ್ಹ ಸ್ಕೋರ್ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News