×
Ad

ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ಗೆ ದೀಪಾ ಅಲಭ್ಯ

Update: 2017-06-22 23:48 IST

ಹೊಸದಿಲ್ಲಿ,ಜೂ.22: ರಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ಗಾಯದ ಸಮಸ್ಯೆಯಿಂದಾಗಿ ಸ್ಪರ್ಧೆಯಿಂದ ದೂರವುಳಿದಿದ್ದ ಜಿಮ್ನಾಸ್ಟ್ ತಾರೆ ದೀಪಾ ಕರ್ಮಾಕರ್ ಮುಂಬರುವ ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.

ಇದೀಗ ಮಂಡಿನೋವಿನಿಂದ ಚೇತರಿಸಿಕೊಳ್ಳುತ್ತಿರುವ 23ರ ಹರೆಯದ ದೀಪಾ ಈವರ್ಷಾರಂಭದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಿಂದಲೂ ವಂಚಿತರಾಗಿದ್ದರು.

ದೀಪಾ ಎಪ್ರಿಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು ಅವರು ಸಂಪೂರ್ಣ ಚೇತರಿಸಿಕೊಂಡು ತರಬೇತಿಯಲ್ಲಿ ತೊಡಗಿಸಿಕೊಳ್ಳಬೇಕಾದರೆ ಕನಿಷ್ಠ ಆರು ತಿಂಗಳ ವಿಶ್ರಾಂತಿಯ ಅಗತ್ಯವಿದೆ. ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ನಡೆಯಲಿದೆ.

ಗಾಯವಾದಾಗ ನಾವು ಅಸಹಾಯಕರಾಗುತ್ತೇವೆ. ಅಥ್ಲೀಟ್ ಆಗಿ ಇದೊಂದು ಬೇಸರದ ವಿಷಯ. ಆದರೆ ನಾನು ಇದನ್ನು ಹಿನ್ನಡೆಯೆಂದು ಭಾವಿಸಲಾರೆ. ಇದೊಂದು ಖಂಡಿತವಾಗಿಯೂ ಸವಾಲಾಗಿದೆ ಎಂದು ಕರ್ಮಾಕರ್ ಗುರುವಾರ ತಿಳಿಸಿದ್ದಾರೆ.

ಕರ್ಮಾಕರ್ ಅವರು ತನ್ನ ಕೋಚ್ ಬಿಸ್ವೇಶ್ವರ ನಂದಿ ಮಾರ್ಗದರ್ಶನದಲ್ಲಿ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಬೀಡುಬಿಟ್ಟಿದ್ದು, ಜಾಗಿಂಗ್ ನಡೆಸಲು ಆರಂಭಿಸಿದ್ದಾರೆ. ಆರು ತಿಂಗಳ ಚಿಕಿತ್ಸೆ ಕೊನೆಗೊಂಡ ಬಳಿಕ ತರಬೇತಿ ಆರಂಭಿಸಲಿದ್ದಾರೆ.

ದೀಪಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಷ್ಟು ತಯಾರಿ ನಡೆಸಿಲ್ಲ. ಆ ಟೂರ್ನಿಗೆ ತಯಾರಿಯಾಗಲು ಸಾಧ್ಯವಿಲ್ಲ. ಗಾಯಗೊಂಡ ಬಳಿಕ ವಾಪಸಾಗುವುದು ತುಂಬಾ ಕಷ್ಟಕರ. ಜಿಮ್ನಾಸ್ಟಿಕ್ ಎಲ್ಲ ಸಮಯದಲ್ಲೂ ಒಂದು ಅಪಾಯಕಾರಿ ಕ್ರೀಡೆ. ಕರ್ಮಾಕರ್ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವತ್ತ ತಮ್ಮ ಗಮನ ಹರಿಸಲಿದ್ದಾರೆ ಎಂದು ನಂದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News