ನಾಳೆಯಿಂದ ವನಿತೆಯರ ವಿಶ್ವಕಪ್ ಕ್ರಿಕೆಟ್

Update: 2017-06-23 18:28 GMT

ಡರ್ಬಿ, ಜೂ.23: ಚಾಂಪಿಯನ್ಸ್ ಟ್ರೋಫಿ ಮುಗಿದು ಒಂದು ವಾರ ಕಳೆಯುವಷ್ಟರಲ್ಲಿ ಇಂಗ್ಲೆಂಡ್‌ನಲ್ಲಿ ಮಹಿಳಾ ವಿಶ್ವಕಪ್ ಟೂರ್ನಮೆಂಟ್ ಶನಿವಾರ ಆರಂಭಗೊಳ್ಳಲಿದೆ.

 ಹನ್ನೊಂದನೆ ಆವೃತ್ತಿಯ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ನ್ಯೂಝಿಲೆಂಡ್‌ನ್ನು , ಎರಡನೆ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಭಾರತ ಎದುರಿಸಲಿದೆ.

ಭಾರತ ತಂಡ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿದೆ. ಇತ್ತೀಚೆಗೆ ನಾಲ್ಕು ರಾಷ್ಟ್ರಗಳ ಕ್ರಿಕೆಟ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತ್ತು.

  2005ರ ವಿಶ್ವಕಪ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದ ಭಾರತ 2017ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿತ್ತು. ಭಾರತ ತಂಡವನ್ನು ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ನಾಯಕಿಯಾಗಿ ಮುನ್ನಡೆಸುತ್ತಿದ್ದಾರೆ. 100 ಪಂದ್ಯಗಳಲ್ಲಿ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ ಮೂರನೆ ಆಟಗಾರ್ತಿ.

ಮಿಥಾಲಿ ರಾಜ್ ಅವರ ಮೊದಲ ಗುರಿ ಸೆಮಿಫೈನಲ್ ಆಗಿದೆ. ಸತತ ಆರು ಅರ್ಧಶತಕಗಳನ್ನು ದಾಖಲಿಸಿರುವ ಮಿಥಾಲಿ ರಾಜ್ ಅವರು ಇದೇ ಪ್ರದರ್ಶನವನ್ನು ಮುಂದುವರಿಸಲು ಬಯಸಿದ್ದಾರೆ.

 ನಾಲ್ಕು ರಾಷ್ಟ್ರಗಳ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ದೀಪ್ತಿ ಶರ್ಮ ಮತ್ತು ಪೂನಮ್ ರಾವತ್ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 320 ರನ್‌ಗಳ ಜೊತೆಯಾಟ ನೀಡಿದ್ದರು. ಮಹಿಳಾ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 300 ರನ್‌ಗಳ ಜೊತೆಯಾಟ ಹೊಸ ದಾಖಲೆಯಾಗಿದೆ.

ಸ್ಮತಿ ಮಂಧಾನ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ. ರಾವುತ್ ಮತ್ತು ಮೊನಾ ಮೆಶ್ರಾಮ್ ಮತ್ತು ಹರ್ಮನ್‌ಪ್ರೀತ್ ಕೌರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

 ಜೂಲನ್ ಗೋಸ್ವಾಮಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರು. ಭಾರತದ ಬೌಲಿಂಗ್ ದಾಳಿಯನ್ನು ಅವರು ಆರಂಭಿಸಲಿದ್ದಾರೆ. ಇವರೊಂದಿಗೆ ಶಿಖಾ ಪಾಂಡೆ ಹೊಸ ಚೆಂಡನ್ನು ಹಂಚಿಕೊಳ್ಳಲಿದ್ದಾರೆ.ಎಕ್ತಾ ಬಿಶ್ತ್ ಸ್ಪಿನ್ ವಿಭಾಗವನ್ನು ಮುನ್ನಡೆಸುವರು.

 ಭಾರತ ಕಳೆದ ನಾಲ್ಕು ಏಕದಿನ ಸರಣಿಗಳಲ್ಲಿ ಸರಣಿ ಜಯ ದಾಖಲಿಸಿದೆ. 17 ಪಂದ್ಯಗಳಲ್ಲಿ 16 ಪಂದ್ಯಗಳನ್ನು ಭಾರತ ಗೆದ್ದುಕೊಂಡಿತ್ತು. ಲಂಕಾ ವಿರುದ್ಧ ಕ್ಲೀನ್ ಸ್ವೀಪ್, ತವರಿನಲ್ಲಿ ವೆಸ್ಟ್‌ಇಂಡಿಸ್, ಬಳಿಕ ದಕ್ಷಿಣ ಆಫ್ರಿಕ ವಿರುದ್ಧ ಮತ್ತು ನಾಲ್ಕು ರಾಷ್ಟ್ರಗಳ ಸರಣಿಯಲ್ಲಿ ಜಯ ಗಳಿಸಿತ್ತು.

ಎರಡು ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡದ ಮೊದಲ ಸವಾಲು ಭಾರತಕ್ಕೆ ಎದುರಾಗಿದೆ.

ಭಾರತ: ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧಾನ, ವೇದಾ ಕೃಷ್ಣ ಮೂರ್ತಿ, ಮೋನಾ ಮೆಶ್ರಾಮ್, ಪೂನಮ್ ರಾವತ್, ದೀಪ್ತಿ ಶರ್ಮ, ಜೂಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಎಕ್ತಾ ಬಿಶ್ತ್, ಸುಶ್ಮಾ ವರ್ಮ, ಮಂಶಿ ಜೋಶಿ, ರಾಜೇಶ್ವರಿ ಗಾಯಕ್‌ವಾಡ್, ಪೂನಮ್ ಯಾದವ್, ನುಝಾತ್ ಪರ್ವಿನ್.

 ಇಂಗ್ಲೆಂಡ್: ಹೀದರ್ ನೈಟ್(ನಾಯಕಿ), ಜಾರ್ಜಿಯಾ ಎಲ್ವಿಸ್, ಜೆನ್ನು ಗುನ್, ಅಲೆಕ್ಸ್ ಹರ್ಟ್‌ಲೆ, ಸಾರಾ ಟೇಲರ್, ಟಮೈ ಬಿಯಮೊಂಟ್, ಕತ್ರೀನೆ ಬ್ರಂಟ್, ದನಿಯೆಲ್ ಹಝೆಲ್, ಬೆಥ್ ಲಾಂಗ್‌ಸ್ಟನ್, ಲೌರಾ ಮಾರ್ಶ್, ಅನ್ಯ ಶ್ರುಬ್‌ಸೊಲೆ, ನತಾಲಿಯಾ ಸ್ಸಿವೆರ್, ಫಾರನ್ ವಿಲ್ಸನ್, ಡೇನಿಲ್ ವೈಟ್, ಲೌರೆನ್ ವಿನ್‌ಫೀಲ್ಡ್.

ಪಂದ್ಯದ ಸಮಯ: ಸಂಜೆ 3ಗಂಟೆಗೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News