ಪತ್ರಕರ್ತನಿಗೆ ತಿರುಗೇಟು ನೀಡಿದ ಭಾರತದ ನಾಯಕಿ ಮಿಥಾಲಿ ರಾಜ್

Update: 2017-06-23 18:01 GMT

ಲಂಡನ್, ಜೂ.23: ಆತ ಬೇರೆ ಏನು ಕೇಳಲಿಲ್ಲ. ನಿಮ್ಮ ನೆಚ್ಚಿನ ಪುರುಷ ಕ್ರಿಕೆಟಿಗ ಯಾರು ? ಎಂದು ಕೇಳಿದ ಪತ್ರಕರ್ತನಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗರಂ ಆಗಿ ಆತನ ತಿರುಗೇಟು ನೀಡಿದ ಘಟನೆ ಇಂದು ನಡೆಯಿತು.

ಐಸಿಸಿ ಮಹಿಳಾ ವಿಶ್ವಕಪ್‌ಗೆ ಶನಿವಾರ ಚಾಲನೆ ದೊರೆಯಲಿದ್ದು, ಭಾರತ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ.

 ಭಾರತದದ ಪಂದ್ಯದ ಮುನ್ನಾದಿನವಾಗಿರುವ ಇಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರಲ್ಲಿ ‘‘ ನಿಮ್ಮ ನೆಚ್ಚಿನ ಪುರುಷ ಆಟಗಾರ ಯಾರು ? ಎಂದು ಪ್ರಶ್ನಿಸಿದರು.

   ಈ ಪ್ರಶ್ನೆಗೆ ಮಿಥಾಲಿ ಸಿಟ್ಟಿನಿಂದ ‘‘ ಇದೇ ಪ್ರಶ್ನೆಯನ್ನು ಪುರುಷ ಆಟಗಾರನಲ್ಲಿ ಕೇಳುತ್ತಿರಾ ? ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ್ತಿ ಯಾರು ಎಂದು ಕೇಳುತ್ತೀರಾ ?’’ ಎಂದು ತಿರುಗೇಟು ನೀಡಿದರು.

 ಮಿಥಾಲಿ ರಾಜ್ ಕ್ರೀಡಾಂಗಣದಲ್ಲೂ ಸ್ಫೋಟಕ ಆಟಕ್ಕೆ ಹೆಸರಾದವರು. ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅವರು 85 ರನ್ ಗಳಿಸಿ ತಂಡಕ್ಕೆ 109 ರನ್‌ಗಳ ಗೆಲುವು ದಾಖಲಿಸಲು ನೆರವಾಗಿದ್ದರು. ಭಾರತ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 275 ರನ ಗಳಿಸಿತ್ತು. ಸ್ಮತಿ ಮಂದಾನ 44 ರನ್, ಪೂನಮ್ ರಾವತ್ 69 ರನ್ ಗಳಿಸಿದ್ದರು.

ಶ್ರೀಲಂಕಾ 48.4 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟಾಗಿತ್ತು. ರಾಜೇಶ್ವರಿ ಗಾಯಕ್‌ವಾಡ್ 7 ಓವರ್‌ಗಳಲ್ಲಿ 12ಕ್ಕೆ 4 ವಿಕೆಟ್ ಉಡಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News