ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾದ ಭಾರತೀಯ ಮಹಿಳೆ
ಬೆಂಗಳೂರು,ಜೂ.26 : ಸ್ಪೇನ್ ದೇಶದ ಮಲಗ ಪಟ್ಟಣದಲ್ಲಿ ರವಿವಾರ ಆರಂಭವಾದ ದ್ವೈವಾರ್ಷಿಕ 21ನೇ ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ -ಜಾಗತಿಕ ಅಂಗ ಕಸಿಗೊಳಗಾದವರ ಕ್ರೀಡಾಕೂಟದಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾದ ಬೆಂಗಳೂರಿನ ರೀನಾ ರಾಜು (35) ಭಾಗವಹಿಸುತ್ತಿದ್ದಾರೆ. ಭಾರತದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಪ್ರಥಮ ಮಹಿಳೆಯೂ ಆಗಲಿರುವ ರೀನಾ ಈ ಕ್ರೀಡಾಕೂಟದಲ್ಲಿ 100 ಮೀಟರ್ ಓಟ ಹಾಗೂ ಬ್ಯಾಡ್ಮಿಂಟನ್ (ಮಿಕ್ಸ್ಡ್ ಡಬಲ್ಸ್) ಪಂದ್ಯಾಟದಲ್ಲಿ ಭಾಗಿಯಾಗಲಿದ್ದಾರೆ.
ನವೆಂಬರ್ 2009ರಲ್ಲಿ ಚೆನ್ನೈಯಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ರೀನಾ ಅವರು ಈ ಅಂಗ ಕಸಿ ಪಡೆಯುವ ಮುನ್ನ ಕಾರ್ಡಿಯೋ ಮೈಯೋಪತಿ ಎಂಬ ಹೃದಯ ಸ್ನಾಯುವಿನ ರೋಗದಿಂದ ಬಳಲುತ್ತಿದ್ದರು.
ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾದ ನಂತರ ರೀನಾ ಅವರು ತಮ್ಮ ಲೈಟ್ ಎ ಲೈಫ್ ಫೌಂಡೇಶನ್ ಸ್ಥಾಪಿಸಿ ಈ ಮುಖಾಂತರ ಅಂಗ ಕಸಿ ಶಸ್ತ್ರಚಿಕಿತ್ಸೆಗೊಳಗಾದ ಹಲವರಿಗೆ ಔಷಧಿಗಳನ್ನೂ ಒದಗಿಸುತ್ತಿದ್ದಾರೆ.
ಹೃದಯ ಕಸಿ ಚಿಕಿತ್ಸೆಗೊಳಗಾಗುವ ಮುನ್ನ ಹಾಕಿ ಆಟಗಾರ್ತಿಯಾಗಿದ್ದ ರೀನಾ ಇತ್ತೀಚಿಗಿನ ವರ್ಷಗಳಲ್ಲಿ ಅಂಡರ್ ವಾಟರ್ ಡೈವಿಂಗ್ ಹಾಗೂ ಸ್ಕೈ ಡೈವಿಂಗ್ ತರಬೇತಿ ಕೂಡ ಪಡೆದು ನಂತರ ಅಥ್ಲೆಟಿಕ್ಸ್ ಹಾಗೂ ಬ್ಯಾಡ್ಮಿಂಟನ್ ಆಟದಲ್ಲಿ ತರಬೇತಿ ಪಡೆದಿದ್ದರು. ವರ್ಲ್ಡ್ ಟ್ರಾನ್ಸ್ ಪ್ಲಾಂಟ್ ಗೇಮ್ಸ್ ಗಾಗಿ ಹಲವಾರು ವೈದ್ಯಕೀಯ ಪರೀಕ್ಷೆಗೊಳಗಾಗಿ ಅವುಗಳಲ್ಲಿ ಅವರು ಉತ್ತೀರ್ಣರಾಗಿದ್ದರು.
ಸ್ಪೇನ್ ಕ್ರೀಡಾಕೂಟದಲ್ಲಿ ಉತ್ತರ ಪ್ರದೇಶದ ಬಲವೀರ್ ಸಿಂಗ್ ಹಾಗೂ ಧರ್ಮೇಂದ್ರ ಸೋಟಿ ಕೂಡ ಭಾಗವಹಿಸುತ್ತಿದ್ದಾರೆ.