ಏಕದಿನ ಕ್ರಿಕೆಟ್‌ನಲ್ಲಿ 'ವಿಶ್ವ ದಾಖಲೆ' ನಿರ್ಮಿಸಿದ ಭಾರತ
ಪೋರ್ಟ್ ಆಫ್ ಸ್ಪೇನ್, ಜೂ.26: ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 105 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರ ಜೊತೆಗೆ 'ವಿಶ್ವ ದಾಖಲೆ'ಯೊಂದನ್ನು ನಿರ್ಮಿಸಿದೆ.
ಭಾರತ ತಂಡ ರವಿವಾರ ನಡೆದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 5 ವಿಕೆಟ್‌ಗಳ ನಷ್ಟಕ್ಕೆ 310 ರನ್ ಗಳಿಸಿತ್ತು. ಏಕದಿನ ಕ್ರಿಕೆಟ್‌ನಲ್ಲಿ 96ನೆ ಬಾರಿ 300 ಹಾಗೂ ಅದಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿತು. 95 ಬಾರಿ 300 ಹಾಗೂ ಅದಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದ್ದ ಆಸ್ಟ್ರೇಲಿಯದ ದಾಖಲೆಯನ್ನು ಮುರಿದು ಮುನ್ನುಗಿತು. ಪ್ರಸ್ತುತ ವಿಶ್ವದ ನಂ.1 ಏಕದಿನ ತಂಡವಾಗಿರುವ ದಕ್ಷಿಣ ಆಫ್ರಿಕ ತಂಡ 77 ಬಾರಿ 300 ಪ್ಲಸ್ ಸ್ಕೋರ್ ದಾಖಲಿಸಿದೆ.
ಭಾರತ 96 ಬಾರಿ 300ಕ್ಕೂ ಅಧಿಕ ಸ್ಕೋರ್ ದಾಖಲಿಸಿದೆ. ಇದರಲ್ಲಿ 75 ಪಂದ್ಯಗಳಲ್ಲಿ ಗೆಲುವು ಹಾಗೂ 19ರಲ್ಲಿ ಸೋಲನುಭವಿಸಿದೆ. ಎರಡು ಪಂದ್ಯಗಳು ಟೈ ಆಗಿವೆ. 95 ಬಾರಿ 300ಕ್ಕೂ ಅಧಿಕ ರನ್ ಗಳಿಸಿರುವ ಆಸ್ಟ್ರೇಲಿಯ 84 ಬಾರಿ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕ 300ಕ್ಕೂ ಅಧಿಕ ರನ್ ಗಳಿಸಿದ್ದಾಗ ಕೇವಲ 7 ಬಾರಿ ಸೋತಿದೆ.
350-400 ಪ್ಲಸ್ ಸ್ಕೋರ್ ಪಟ್ಟಿಯಲ್ಲಿ ಕೊಹ್ಲಿ ಬಳಗ ಎರಡನೆ ಸ್ಥಾನದಲ್ಲಿದೆ. ಭಾರತ ಒಟ್ಟು 23 ಬಾರಿ ಈ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕ(24) ಆನಂತರದ ಸ್ಥಾನದಲ್ಲಿದೆ. 400ಕ್ಕೂ ಅಧಿಕ ಸ್ಕೋರ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಮತ್ತೊಮ್ಮೆ ಭಾರತ 2ನೆ ಸ್ಥಾನದಲ್ಲಿದೆ. ಒಟ್ಟು 6 ಬಾರಿ 400-ಪ್ಲಸ್ ಸ್ಕೋರ್ ಗಳಿಸಿರುವ ದಕ್ಷಿಣ ಆಫ್ರಿಕ ಮೊದಲ ಸ್ಥಾನದಲ್ಲಿದೆ. ಭಾರತ 5 ಬಾರಿ ಈ ಸಾಧನೆ ಮಾಡಿತ್ತು.
ಭಾರತ 1996ರಲ್ಲಿ ಶಾರ್ಜಾದಲ್ಲಿ ನಡೆದಿದ್ದ ಏಕದಿನದಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಬಾರಿ 300ಕ್ಕಿಂತ ಹೆಚ್ಚು ರನ್ ಗಳಿಸಿತ್ತು. 1999ರಲ್ಲಿ ಟೌಂಟನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಶ್ರೀಲಂಕಾದ ವಿರುದ್ಧ ಮೊದಲ ಬಾರಿ 350ಕ್ಕೂ ಅಧಿಕ ರನ್ ಹಾಗೂ 2007ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಬರ್ಮುಡಾ ತಂಡದ ವಿರುದ್ಧ ಮೊದಲ ಬಾರಿ 400ಕ್ಕೂ ಅಧಿಕ ಸ್ಕೋರ್ ದಾಖಲಿಸಿತ್ತು.