×
Ad

ಏಗಾನ್ ಕ್ಲಾಸಿಕ್ ಓಪನ್: ಕ್ವಿಟೋವಾಗೆ ಸಿಂಗಲ್ಸ್ ಕಿರೀಟ

Update: 2017-06-26 22:54 IST

ಬರ್ಮಿಂಗ್‌ಹ್ಯಾಮ್, ಜೂ.26: ಏಗಾನ್ ಕ್ಲಾಸಿಕ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಏಶ್‌ಲೆಯ್ ಬಾರ್ಟಿ ಅವರನ್ನು 4-6, 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದ ಝೆಕ್‌ನ ಪೆಟ್ರಾ ಕ್ವಿಟೋವಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರವಿವಾರ ಇಲ್ಲಿ ನಡೆದ ಗ್ರಾಸ್-ಕೋರ್ಟ್ ಟೂರ್ನಮೆಂಟ್‌ನ ಪ್ರಶಸ್ತಿ ಸುತ್ತಿನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಬಾರ್ಟಿ ಅವರನ್ನು 4-6, 6-3, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಈ ಗೆಲುವಿನ ಮೂಲಕ ಜುಲೈ 3 ರಿಂದ ಆರಂಭವಾಗಲಿರುವ ವರ್ಷದ ಮೂರನೆ ಗ್ರಾನ್‌ಸ್ಲಾಮ್ ಟೂರ್ನಿ ವಿಂಬಲ್ಡನ್‌ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ತನ್ನ ಮನೆಗೆ ನುಗ್ಗಿದ್ದ ದರೋಡೆಕೋರನಿಂದ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಬಳಿಕ ಚೇತರಿಸಿಕೊಂಡಿರುವ ಕ್ವಿಟೋವಾ ಆಡಿದ್ದ ಎರಡನೆ ಟೂರ್ನಮೆಂಟ್ ಇದಾಗಿದೆ.

ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಹಾಗೂ ಕಳೆದ ವರ್ಷದ ರನ್ನರ್ ಅಪ್ ಆ್ಯಂಜೆಲಿಕ್ ಕೆರ್ಬರ್ ಕಳಪೆ ಫಾರ್ಮ್‌ನಲ್ಲಿರುವ ಹಿನ್ನೆಲೆಯಲ್ಲಿ ಈ ವರ್ಷದ ವಿಂಬಲ್ಡನ್‌ನಲ್ಲಿ 27ರ ಹರೆಯದ ಕ್ವಿಟೋವಾ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರ್ತಿಯಾಗಿದ್ದಾರೆ.

ಕ್ವಿಟೋವಾ ಈ ಹಿಂದೆ 2011 ಹಾಗೂ 2014ರಲ್ಲಿ ವಿಂಬಲ್ಡನ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು. ರವಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಟ್ರೋಫಿಯನ್ನು ಜಯಿಸಿದ್ದರೂ ತನ್ನಿಂದ ಇನ್ನಷ್ಟೇ ಶ್ರೇಷ್ಠ ಪ್ರದರ್ಶನ ಹೊರಹೊಮ್ಮಬೇಕಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News