ಇಂಗ್ಲೆಂಡ್‌ಗೆ ಟ್ವೆಂಟಿ-20 ಸರಣಿ: ದಕ್ಷಿಣ ಆಫ್ರಿಕಕ್ಕೆ ಮುಖಭಂಗ
ಕಾರ್ಡಿಫ್, ಜೂ.27: ಚೊಚ್ಚಲ ಪಂದ್ಯವನ್ನಾಡಿದ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಸಾಹಸದ ನೆರವಿನಿಂದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೂರನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 19 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.
ಈ ಗೆಲುವಿನೊಂದಿಗೆ ಆಂಗ್ಲರು ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದ್ದಾರೆ.
ಸೋಫಿಯಾಗಾರ್ಡನ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮಲಾನ್(78 ರನ್, 44 ಎಸೆತ, 12 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತ್ತು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ದಕ್ಷಿಣ ಆಫ್ರಿಕ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಎಬಿಡಿವಿಲಿಯರ್ಸ್(35 ರನ್, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಒಂದುಹಂತದಲ್ಲಿ ಪಂದ್ಯವನ್ನು ತನ್ನತ್ತ ಸೆಳೆಯುವ ವಿಶ್ವಾಸ ಮೂಡಿಸಿದ್ದರು. ಆದರೆ, 11ನೆ ಓವರ್‌ನಲ್ಲಿ ಮಾಸನ್ ಕ್ರೇನ್ ಎಸೆತದಲ್ಲಿ ಔಟಾದರು. ಡಿವಿಲಿಯರ್ಸ್ ಔಟಾಗಿರುವುದು ಪಂದ್ಯದ ಟರ್ನಿಂಗ್ ಪಾಯಿಂಟ್ ಎನಿಸಿಕೊಂಡಿತು.
ಮೊದಲ 9 ಓವರ್‌ಗಳಲ್ಲಿ ಕೇವಲ 59 ರನ್ ಗಳಿಸಿದ್ದ ಹರಿಣ ಪಡೆ ಚೇಸಿಂಗ್‌ನ ವೇಳೆ ನಿರೀಕ್ಷಿತ ಮಟ್ಟದ ಆರಂಭ ಪಡೆಯಲಿಲ್ಲ. ಅಗತ್ಯದ ರನ್‌ರೇಟ್ ಏರುತ್ತಿದ್ದಾಗ ನಾಯಕ ಡಿವಿಲಿಯರ್ಸ್ ಬಿರುಸಿನ ಬ್ಯಾಟಿಂಗ್‌ನಿಂದ ಇನಿಂಗ್ಸ್‌ಗೆ ಚುರುಕು ಮುಟ್ಟಿಸಿದ್ದರು. ಡಿವಿಲಿಯರ್ಸ್ ಔಟಾದ ಬೆನ್ನಿಗೇ ಡೇವಿಡ್ ಮಿಲ್ಲರ್ ಪೆವಿಲಿಯನ್‌ಗೆ ತೆರಳಿದಾಗ ಆಫ್ರಿಕದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 86. ಆಫ್ರಿಕದ ಇನಿಂಗ್ಸ್‌ನಲ್ಲಿ ಮೊಸೆಲ್(36) ಹಾಗೂ ಫೆಲುಕ್ವಾವೊ(ಅಜೇಯ 27) ಕೆಳ ಸರದಿಯಲ್ಲಿ ಒಂದಷ್ಟು ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.
ಇಂಗ್ಲೆಂಡ್‌ನ ಪರ ಕ್ರಿಸ್ ಜೋರ್ಡನ್(3-31) ಹಾಗೂ ಕರಾನ್(2-22) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡಕ್ಕೆ ಅಲೆಕ್ಸ್ ಹೇಲ್ಸ್(36) ಹಾಗೂ ಮಲಾನ್(78) ಉತ್ತಮ ಆರಂಭ ಒದಗಿಸಿದರು. ಈ ಜೋಡಿ 2ನೆ ವಿಕೆಟ್‌ಗೆ 105 ರನ್ ಜೊತೆಯಾಟ ನಡೆಸಿತ್ತು. ಈ ಇಬ್ಬರು ಆಟಗಾರರು ದಕ್ಷಿಣ ಆಫ್ರಿಕ ಸರಣಿ ಗೆಲ್ಲುವ ಕನಸನ್ನು ಭಗ್ನಗೊಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 20 ಓವರ್‌ಗಳಲ್ಲಿ 181/8
(ಮಲಾನ್ 78, ರಾಯ್ 36, ಬಟ್ಲರ್ 31, ಪ್ಯಾಟರ್ಸನ್ 4-32)
ದಕ್ಷಿಣ ಆಫ್ರಿಕ: 20 ಓವರ್‌ಗಳಲ್ಲಿ 162/7
(ಮೊಸೆಲ್ 36, ಡಿವಿಲಿಯರ್ಸ್ 35, ಸ್ಮಟ್ಸ್ 29, ಜೋರ್ಡನ್ 3-31, ಕರಾನ್ 2-22)
ಪಂದ್ಯಶ್ರೇಷ್ಠ: ಡೇವಿಡ್ ಮಲಾನ್(ಇಂಗ್ಲೆಂಡ್).