ಶಿಸ್ತು ವಿಚಾರಣೆ ಎದುರಿಸಲಿರುವ ಮಾಲಿಂಗ
Update: 2017-06-27 22:33 IST
ಮುಂಬೈ, ಜೂ.27: ಕ್ರೀಡಾ ಸಚಿವರ ವಿರುದ್ಧ ಮಾಧ್ಯಮದ ಎದುರು ಹೇಳಿಕೆ ನೀಡುವ ಮೂಲಕ ಒಪ್ಪಂದದ ನಿಯಮ ಉಲ್ಲಂಘಿಸಿರುವ ವೇಗದ ಬೌಲರ್ ಲಸಿತ್ ಮಾಲಿಂಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಶಿಸ್ತು ವಿಚಾರಣೆ ಎದುರಿಸಲಿದ್ದಾರೆ ಎಂದು ಕ್ರಿಕೆಟ್ ಮಂಡಳಿ ಮಂಗಳವಾರ ಘೋಷಿಸಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ವಾಪಸಾದ ಬಳಿಕ ಮಾಧ್ಯಮದ ಎದುರು ಹೇಳಿಕೆ ನೀಡಿ ಎರಡು ಬಾರಿ ನಿಯಮ ಉಲ್ಲಂಘಿಸಿರುವ ಮಾಲಿಂಗ ತ್ರಿಸದಸ್ಯ ಸಮಿತಿಯಿಂದ ವಿಚಾರಣೆ ಎದುರಿಸಲಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೊದಲು ಮುಖ್ಯ ಕಾರ್ಯಾಧಿಕಾರಿಯಿಂದ ಪೂರ್ವಾನುಮತಿ ಪಡೆಯಬೇಕಾಗಿತ್ತು ಎಂದು ಎಸ್‌ಎಲ್‌ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.