ಪ್ರಧಾನ ಕೋಚ್ ಹುದ್ದೆಯ ಮೇಲೆ ಶಾಸ್ತ್ರಿ ಕಣ್ಣು

Update: 2017-06-27 17:52 GMT

ಹೊಸದಿಲ್ಲಿ, ಜೂ.27: ಭಾರತದ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ ಖಾಲಿ ಇರುವ ಟೀಮ್ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಆಗಸ್ಟ್ 2014ರಿಂದ ಎಪ್ರಿಲ್ 2016ರ ತನಕ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದ ರವಿ ಶಾಸ್ತ್ರಿ ವರ್ಷದ ಹಿಂದೆ ಕೋಚ್ ಹುದ್ದೆಗೆ ಪ್ರಯತ್ನ ನಡೆಸಿದ್ದರೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಶಾಸ್ತ್ರಿ ಅರ್ಜಿಯನ್ನು ತಿರಸ್ಕರಿಸಿದ್ದ ಸಚಿನ್ ತೆಂಡುಲ್ಕರ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಅನಿಲ್ ಕುಂಬ್ಳೆಗೆ ಕೋಚ್ ಆಗಿ ನೇಮಕ ಮಾಡಿತ್ತು.
ಅನಿಲ್ ಕುಂಬ್ಳೆ ಕೋಚ್ ಹುದ್ದೆಯಿಂದ ನಿರ್ಗಮಿಸುವ ಸೂಚನೆ ಲಭಿಸಿದ ಬೆನ್ನಲ್ಲೆ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ವೀರೇಂದ್ರ ಸೆಹ್ವಾಗ್, ಟಾಮ್ ಮೋಡಿ, ಲಾಲ್‌ಚಂದ್ ರಜಪೂತ್,ದೊಡ್ಡ ಗಣೇಶ್ ಮತ್ತು ರಿಚರ್ಡ್ ಪೈಬಸ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ನಷ್ಟು ಮಂದಿಗೆ ಅನುಕೂಲವಾಗುವಂತೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಬಿಸಿಸಿಐ ವಿಸ್ತರಿಸಿತ್ತು. ಇದೇ ಅವಕಾಶವನ್ನು ಬಳಸಿಕೊಂಡಿರುವ ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು.
ಬಿಸಿಸಿಐ ಆಡಳಿತ ಸಮಿತಿ ಕುಂಬ್ಳೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿ ಮುಗಿಯುವ ತನಕ ಕೋಚ್ ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ವಿನಂತಿ ಮಾಡಿದ್ದರೂ, ಅನಿಲ್ ಕುಂಬ್ಳೆ ಈ ಆಫರ್‌ನ್ನು ತಿರಸ್ಕರಿಸಿದ್ದರು.
 ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಭಾರತದ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್,ನ್ಯೂಝಿಲೆಂಡ್.ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಆಸ್‌ಟರೇಲಿಯ ವಿರುದ್ಧ ಗೆಲುವು ದಾಖಲಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ದೃಢಪಡಿಸಿತ್ತು. ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಅವರ ನಡುವಿನ ಭಿನ್ನಮತದ ಹಿನ್ನೆಲೆಯಲ್ಲಿ ಬಿಸಿಸಿಐ ಹೊಸ ಕೋಚ್‌ನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News