ಬಾಕ್ಸಿಂಗ್ ಡಬಲ್ ಪ್ರಶಸ್ತಿಗಾಗಿ ವಿಜೇಂದರ್-ಝುಲ್ಪಿಕರ್ ಫೈಟ್

Update: 2017-06-27 17:54 GMT

ಮುಂಬೈ,ಜೂ.27: ಭಾರತದ ಸ್ಟಾರ್ ವೃತ್ತಿಪರ ಬಾಕ್ಸರ್ ಹಾಗೂ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಆಗಸ್ಟ್ 5 ರಂದು ನಡೆಯಲಿರುವ ಡಬಲ್ ಟೈಟಲ್ ಫೈಟ್‌ನಲ್ಲಿ ಚೀನಾದ ಎಡಗೈ ಫೈಟರ್ ಝುಲ್ಪಿಕರ್ ಮೈಮೈತಿಅಲಿ ಅವರನ್ನು ಎದುರಿಸಲಿದ್ದಾರೆ.
ಡಬ್ಲುಬಿಒ ಏಷ್ಯಾ ಪೆಸಿಫಿಕ್ ಮಿಡ್ಲ್‌ವೇಟ್ ಚಾಂಪಿಯನ್ ವಿಜೇಂದರ್ ಡಬ್ಲುಬಿಒ ಒರಿಯಂಟಲ್ ಸೂಪರ್ ಮಿಡ್ಲ್‌ವೇಟ್ ಚಾಂಪಿಯನ್ ಝುಲ್ಪಿಕರ್‌ರನ್ನು ವರ್ಲಿಯ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದ್ದಾರೆ. ವಿಜೇಂದರ್ ಉಪಸ್ಥಿತಿಯಲ್ಲಿ ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಲಾಯಿತು.

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಲೀ ಬೆರ್ಡ್‌ರಿಂದ ತರಬೇತಿ ಪಡೆಯುತ್ತಿರುವ ವಿಜೇಂದರ್ ಮುಂಬೈನಲ್ಲಿ ನಡೆಯಲಿರುವ ಬಾಕ್ಸಿಂಗ್ ಫೈಟ್‌ನ ಮೊದಲ ಟಿಕೆಟ್‌ನ್ನು ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್‌ಗೆ ಹಸ್ತಾಂತರಿಸಿದರು.
ಈ ಬಾಕ್ಸಿಂಗ್‌ನಲ್ಲಿ ಇಬ್ಬರು ಬಾಕ್ಸರ್‌ಗಳು ತಮ್ಮ ಡಬ್ಲುಬಿಒ ಪ್ರಶಸ್ತಿಯನ್ನು ಪಣಕ್ಕಿಡಬೇಕು. ಪಂದ್ಯ ಗೆಲ್ಲುವ ಬಾಕ್ಸರ್ ಎರಡೂ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದ್ದಾನೆ.

ನನ್ನ ಫೈಟ್‌ನ ಮೊದಲ ಟಿಕೆಟ್‌ನ್ನು ಸಚಿನ್ ತೆಂಡುಲ್ಕರ್ ಸರ್‌ಗೆ ನೀಡಿದ್ದೇನೆ. ಇದು ನನ್ನ ಪಾಲಿಗೆ ಉತ್ತಮ ಆರಂಭ. ನಾನು ಝುಲ್ಪಿಕರ್ ವಿರುದ್ಧ ಪಂದ್ಯಕ್ಕೆ ಸಜ್ಜಾಗಿದ್ದೇನೆ ಎಂದು ವಿಜೇಂದರ್ ತಿಳಿಸಿದ್ದಾರೆ.
ಭಾರತ ಇತರ ಮೂವರು ಬಾಕ್ಸರ್‌ಗಳಾದ ಅಖಿಲ್ ಕುಮಾರ್, ಜಿತೇಂದರ್ ಕುಮಾರ್ ಹಾಗೂ ನೀರಜ್ ಗಯಾತ್ ವೃತ್ತಿಪರ ಬಾಕ್ಸಿಂಗ್ ರಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅಂತಾರಾಷ್ಟ್ರೀಯ ಬಾಕ್ಸರ್‌ಗಳನ್ನು ಎದುರಿಸಲಿದ್ದಾರೆ. ಎದುರಾಳಿಗಳನ್ನು ಯಾರೆಂದು ಇನ್ನೂ ನಿರ್ಧಾರವಾಗಿಲ್ಲ.
2006ರ ಮೆಲ್ಬೋರ್ನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿರುವ ಅಖಿಲ್‌ಗೆ ಇದು ಮೊದಲ ವೃತ್ತಿಪರ ಬಾಕ್ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News