ಬಿಸಿಸಿಐ ಏಳು ಸದಸ್ಯರ ಸಮಿತಿಯಲ್ಲಿ ಗಂಗುಲಿ

Update: 2017-06-27 17:57 GMT

ಹೊಸದಿಲ್ಲಿ,ಜೂ.27: ಲೋಧಾ ಸಮಿತಿಯ ಶಿಫಾರಸು ಮಾಡಿರುವ ಸುಧಾರಣೆಯನ್ನು ಅನುಷ್ಠಾನಕ್ಕೆ ತರಲು ಬಿಸಿಸಿಐ ಮಂಗಳವಾರ ಏಳು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.

ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸಮಿತಿಯ ಅಧ್ಯಕ್ಷರಾಗಿದ್ದು, ಭಾರತದ ಮಾಜಿ ನಾಯಕ ಸೌರವ್ ಗಂಗುಲಿ, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಮಿತಿಯಲ್ಲಿದ್ದಾರೆ.

ಟಿ.ಸಿ. ಮ್ಯಾಥ್ಯೂ, ನಬಾ ಭಟ್ಟಾಚಾರ್ಯ ಹಾಗೂ ಜಯ ಮೆಹ್ತಾ ಸಮಿತಿಯಲ್ಲಿರುವ ಇತರ ಸದಸ್ಯರಾಗಿದ್ದಾರೆ. ಏಳು ಸದಸ್ಯರ ಸಮಿತಿಯು ಜಸ್ಟಿಸ್ ಲೋಧಾ ಸಮಿತಿಯ ಶಿಫಾರಸುಗಳನ್ನು ಉತ್ತಮವಾಗಿ ಹಾಗೂ ಕ್ಷಿಪ್ರವಾಗಿ ಅನುಷ್ಠಾನಕ್ಕೆ ತರುವ ಸಂಬಂಧ ಕಾರ್ಯನಿರ್ವಹಿಸಲಿದೆ.

ಮುಂಬೈನ ಕ್ರಿಕೆಟ್ ಸೆಂಟರ್‌ನಲ್ಲಿ ಜೂ.26,2017 ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜು.18,2016ರಲ್ಲಿ ಗೌರವಾನ್ವಿತ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಕ್ಕೆ ತರುವ ಸಂಬಂಧ ಏಳು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

 ಬಿಸಿಸಿಐ ಸುಪ್ರೀಂಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಸುವ ಮೊದಲು ವರದಿ ಅನುಷ್ಠಾನಕ್ಕೆ ಸಂಬಂಧಿಸಿ ಇರುವ ಸಮಸ್ಯೆಯನ್ನು ಗುರುತಿಸುವ ಮಹತ್ವದ ಸವಾಲು ಸಮಿತಿಯ ಮುಂದಿದೆ. ಸಮಿತಿಯು ಜೂ.30 ರಂದು ಮೊದಲ ಸಭೆ ನಡೆಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News