ಫಿಫಾ ಅಂಡರ್-17 ವಿಶ್ವಕಪ್‌ನ ಪಂದ್ಯಗಳು ದಿಲ್ಲಿಗೆ ಸ್ಥಳಾಂತರ

Update: 2017-06-28 18:51 GMT

ಹೊಸದಿಲ್ಲಿ, ಜೂ.28: ಮುಂಬೈನಲ್ಲಿ ನಿಗದಿಯಾಗಿರುವ ಅಂಡರ್-17 ವಿಶ್ವಕಪ್ ಪಂದ್ಯಗಳನ್ನು ಸರಕಾರದ ವಿನಂತಿಯಂತೆ  ರಾಜಧಾನಿ ಹೊಸದಿಲ್ಲಿಗೆ ಸ್ಥಳಾಂತರಿಸಲು ಫಿಫಾ ಒಪ್ಪಿಕೊಂಡಿದೆ.

  ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮುಂಬೈನಲ್ಲಿ ಕೆಲವು ಪಂದ್ಯಗಳನ್ನು ನಿಯೋಜಿಸಲು ಬಯಸಿತ್ತು. ಆದರೆ ಇದೀಗ ಕ್ರೀಡಾ ಸಚಿವಾಲಯವು ಮುಂಬೈನಲ್ಲಿ ನಿಗದಿಯಾದ ಪಂದ್ಯಗಳನ್ನು ರಾಜಧಾನಿಗೆ ಸ್ಥಳಾಂತರ ಮಾಡಲು ಫಿಫಾಕ್ಕೆ ಮನವಿ ಮಾಡಿತ್ತು.

ಭಾರತ ಸರಕಾರದ ಮನವಿಯಂತೆ ಮುಂಬೈಯಲ್ಲಿ ನಿಗದಿಯಾಗಿರುವ ಫುಟ್ಬಾಲ್ ಪಂದ್ಯಗಳನ್ನು ದಿಲ್ಲಿಗೆ ಸ್ಥಳಾಂತರ ಮಾಡಿರುವುದಾಗಿ ಫಿಫಾ ಹೇಳಿದೆ.

ಭಾರತದ ತಂಡ ಫಿಫಾ ಅಂಡರ್ -17 ವಿಶ್ವಕಪ್ ಟೂರ್ನಿಗೆ ‘ಎ’ ಗ್ರೂಪ್‌ನಲ್ಲಿ ಸ್ಥಾನ ಪಡೆದಿದೆ.ಒಟ್ಟು ನಾಲ್ಕು ತಂಡಗಳ ‘ಎ’ ಗುಂಪಿನಲ್ಲಿ ಭಾರತ ಎ1 ತಂಡವಾಗಿದೆ.ಈ ಮೊದಲು ‘ಎ’ ಗುಂಪಿನ ಎಲ್ಲ ಪಂದ್ಯಗಳು ನವಿ ಮುಂಬೈನಲ್ಲಿ ನಿಗದಿಯಾಗಿತ್ತು.

ಇದೀಗ ‘ಬಿ’ ಗ್ರೂಪ್‌ನ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್ ಅಕ್ಟೋಬರ್ 6ರಿಂದ 28ರ ತನಕ ಭಾರತದ ಆರು ನಗರಗಳಲ್ಲಿ ನಡೆಯಲಿದೆ. ಡ್ರಾ ಜುಲೈ 7ರಂದು ಮುಂಬೈನಲ್ಲಿ ನಡೆಯಲಿದ್ದು, ಇಬ್ಬರು ಹಿರಿಯ ಫುಟ್ಬಾಲ್ ಆಟಗಾರರು ಡ್ರಾ ವೇಳೆ ಉಪಸ್ಥಿತರಿರುತ್ತಾರೆ ಎಂದು ಫಿಫಾ ವಿಶ್ವಕಪ್ ಆಯೋಜನಾ ಸಮಿತಿಯ ಮುಖ್ಯಸ್ಥ ಜೈಮೆ ಹೆರ್ಝಾ ತಿಳಿಸಿದ್ದಾರೆ.

ಗೋವಾ, ದಿಲ್ಲಿ, ವಿಶಾಖಪಟ್ಟಣದಲ್ಲಿ ಟಿಕೆಟ್ ಮಾರಾಟ ಮಂದಗತಿಯಲ್ಲಿ ನಡೆಯುತ್ತಿದೆ. ಡ್ರಾ ಬಳಿಕ ಟಿಕೆಟ್ ಮಾರಾಟ ಭರ್ಜರಿಯಾಗಿ ಸಾಗಬಹುದು ಎಂಬ ವಿಶ್ವಾಸವನ್ನು ಹೆರ್ಝಾ ವ್ಯಕ್ತಪಡಿಸಿದ್ದಾರೆ.

ಗುವಾಹಟಿ, ಕೊಚ್ಚಿ ಹಾಗೂ ಕೋಲ್ಕತಾದಲ್ಲಿ ವಿಶ್ವಕಪ್ ಆಯೋಜಿಸಲು ನಡೆದಿರುವ ತಯಾರಿ ಬಗ್ಗೆ ಹೆರ್ಝಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಿಶ್ವಕಪ್ ಮೂಲಕ ಭಾರತದ ಫುಟ್ಬಾಲ್ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವನ್ನು ಹೆರ್ಝಾ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News