ಭಾರತಕ್ಕೆ ಸತತ ಎರಡನೆ ಜಯ
ಟೌಂಟನ್, ಜೂ.29: ಮಹಿಳೆಯರ ವಿಶ್ವಕಪ್‌ನ ಎರಡನೆ ಪಂದ್ಯದಲ್ಲಿ ಭಾರತ ಇಂದು ವೆಸ್ಟ್‌ಇಂಡೀಸ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 184 ರನ್‌ಗಳ ಸವಾಲನ್ನು ಪಡೆದ ಭಾರತದ ಮಹಿಳಾ ತಂಡ ಇನ್ನೂ 45ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 186ರನ್ ಗಳಿಸಿ ಸತತ ಎರಡನೆ ಗೆಲುವು ದಾಖಲಿಸಿತು.
ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಔಟಾಗದೆ 106 ರನ್ (108ಎ, 13ಬೌ,2ಸಿ) ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
25ನೆ ಪಂದ್ಯವನ್ನಾಡಿದ 20ರ ಮುಂಬೈನ ಆಟಗಾರ್ತಿ ಮಂಧಾನ ತನ್ನ ಎರಡನೆ ಏಕದಿನ ಶತಕ ದಾಖಲಿಸಿದರು.
ಭಾರತ ಇನಿಂಗ್ಸ್ ಆರಂಭಿಸಿ ಖಾತೆ ತೆರೆಯುವ ಮೊದಲೇ ಮೊದಲ ವಿಕೆಟ ಕಳೆದುಕೊಂಡಿತ್ತು. ಆರಂಭಿಕ ಆಟಗಾರ್ತಿ ಪೂನಮ್ ರಾವತ್ (0) ಖಾತೆ ತೆರೆಯದೆ ಕೊನ್ನೆಲ್‌ಗೆ ವಿಕೆಟ್ ಒಪ್ಪಿಸಿದರು.
ಎರಡನೆ ವಿಕೆಟ್‌ಗೆ ಮಂಧಾನಗೆ ದೀಪ್ತಿ ಶರ್ಮ ಜೊತೆಯಾದರೂ , ಶರ್ಮ (6) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
7.2ಓವರ್‌ಗಳಲ್ಲಿ 33 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತಕ್ಕೆ ಮೂರನೆ ವಿಕೆಟ್‌ಗೆ ಮಂಧಾನ ಅವರಿಗೆ ನಾಯಕಿ ಮಿಥಾಲಿ ರಾಜ್ ಜೊತೆಯಾದರು.
ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 108ರನ್ ಸೇರ್ಪಡೆಗೊಂಡಿತು. ನಾಯಕ್ ಮಿಥಾಲಿ ರಾಜ್ 4 ರನ್‌ನಿಂದ ಅರ್ಧಶತಕ ವಂಚಿತಗೊಂಡರು.
ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 45ರನ್ ಸೇರಿಸಿದ ಮೊನಾ ಮೆಶ್ರಮ್ ಮತ್ತು ಮಂಧಾನ ತಂಡವನ್ನು ಗೆಲುವಿನ ದಡ ತಲುಪಿಸಿದರು. ಮೆಶ್ರಮ್ ಔಟಾಗದೆ 18 ರನ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 183 ರನ್ ಗಳಿಸಿತ್ತು.
ವಿಂಡೀಸ್ ತಂಡದ ಆರಂಭಿಕ ಆಟಗಾರ್ತಿ ಹಲೈ ಮ್ಯಾಥ್ಯೂಸ್ 43 ರನ್, ಆನೆಲ್ ಡಾಲೈ 33ರನ್, ಮತ್ತು ಅಫೈ ಫ್ಲೆಚೆರ್ ಔಟಾಗದೆ 36 ರನ್ ಗಳಿಸಿದರು.
ಭಾರತದ ಎಚ್.ಕೌರ್ , ಪೂನಮ್ ಯಾದವ್, ದೀಪ್ತಿ ಶರ್ಮ ತಲಾ 2 ವಿಕೆಟ್ ಪಡೆದರು. ಏಕತಾ ಬಿಷ್ಟ್ 1 ವಿಕೆಟ್ ಪಡೆದರು.