ಭಾರತ ಎ ಹಾಗೂ ಅಂಡರ್-19 ತಂಡಕ್ಕೆ ದ್ರಾವಿಡ್ ಕೋಚ್

Update: 2017-06-30 17:40 GMT

ಚೆನ್ನೈ, ಜೂ.30: ಮಾಜಿ ನಾಯಕ ರಾಹುಲ್ ದ್ರಾವಿಡ್ ಮುಂದಿನ ಎರಡು ವರ್ಷಗಳ ಅವಧಿಗೆ ಭಾರತ ಎ ಹಾಗೂ ಅಂಡರ್-19 ತಂಡಗಳ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ಘೋಷಿಸಿದೆ.

ಭಾರತದ ಮಾಜಿ ನಾಯಕ ದ್ರಾವಿಡ್ 2015ರಲ್ಲಿ ಮೊದಲ ಬಾರಿ ಎರಡು ತಂಡಗಳ ಕೋಚ್ ಆಗಿ ಆಯ್ಕೆಯಾಗಿದ್ದರು. ದ್ರಾವಿಡ್ ಮಾರ್ಗದರ್ಶನದಲ್ಲಿ ಯುವ ಆಟಗಾರರು ದೇಶ-ವಿದೇಶಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರು.

ದ್ರಾವಿಡ್ ಕೋಚ್ ಆಗಿ ಆಯ್ಕೆಯಾದ ಸಂದರ್ಭದಲ್ಲಿ ಭಾರತ ಎ ತಂಡ ಆಸ್ಟ್ರೇಲಿಯದಲ್ಲಿ ನಡೆದಿದ್ದ ತ್ರಿಕೋನ ಸರಣಿಯನ್ನು ಜಯಿಸಿತ್ತು. ಅಂಡರ್-19 ತಂಡ ಕೂಡ ಉತ್ತಮ ಪ್ರದರ್ಶನ ನೀಡಲು ದ್ರಾವಿಡ್ ಮಾರ್ಗದರ್ಶನ ನೀಡಿದ್ದರು. 2016ರಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ತಲುಪಿತ್ತು. ಆದರೆ, ಅತ್ಯಂತ ಪೈಪೋಟಿಯಿಂದ ಕೂಡಿದ್ದ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ದ ಸೋತಿತ್ತು.

ಕಳೆದ ಎರಡು ವರ್ಷಗಳಲ್ಲಿ ಯುವ ಪ್ರತಿಭೆಗಳು ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ರಾಹುಲ್ ದ್ರಾವಿಡ್ ಸಲಹೆ-ಸೂಚನೆ ನೀಡಿದ್ದರು. ಮುಂದಿನ 2 ವರ್ಷಗಳಿಗೆ ದ್ರಾವಿಡ್ ಸೇವೆಯನ್ನು ಮುಂದುವರಿಸಲು ನಾವು ಸಂತೋಷಪಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯುವ ಆಟಗಾರರು ಬೆಳಕಿಗೆ ಬರುವ ವಿಶ್ವಾಸದಲ್ಲಿದ್ದೇವೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News