×
Ad

ವಿಂಬಲ್ಡನ್ ಟೂರ್ನಿ: ಸೆಮಿಫೈನಲ್‌ನಲ್ಲಿ ಮರ್ರೆ-ನಡಾಲ್, ಫೆಡರರ್-ಜೊಕೊವಿಕ್ ಮುಖಾಮುಖಿ ಸಾಧ್ಯತೆ

Update: 2017-06-30 23:33 IST

ಲಂಡನ್, ಜೂ.30: ಸೋಮವಾರ ಆರಂಭವಾಗಲಿರುವ ವರ್ಷದ ಮೂರನೆ ಗ್ರಾನ್‌ಸ್ಲಾಮ್ ಟೂರ್ನಿ ವಿಂಬಲ್ಡನ್‌ಗೆ ಡ್ರಾ ಪ್ರಕ್ರಿಯೆ ಶುಕ್ರವಾರ ಇಲ್ಲಿ ನಡೆದಿದ್ದು, ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ರಫೆಲ್ ನಡಾಲ್‌ರನ್ನು, ದಾಖಲೆ 8ನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಫೆಡರರ್ ಅವರು ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ.

ಅಗ್ರ ಶ್ರೇಯಾಂಕದ ಮರ್ರೆ ಸೋಮವಾರ ಕ್ವಾಲಿಫೈಯರ್ ಆಟಗಾರನನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಜೊಕೊವಿಕ್ ಅವರು ಸ್ಲೋವಾಕಿಯದ ಮಾರ್ಟಿನ್ ಕ್ಲಿಝಾನ್‌ರನ್ನು ಎದುರಿಸಲಿದ್ದಾರೆ. ಮೂರನೆ ಸುತ್ತಿನಲ್ಲಿ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಮುಖಾಮುಖಿಯಾಗುವ ನಿರೀಕ್ಷೆಯಿದೆ.

ಮೂರನೆ ಶ್ರೇಯಾಂಕದ ಫೆಡರರ್ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್‌ರನ್ನು ಎದುರಿಸಿದರೆ, ನಾಲ್ಕನೆ ಶ್ರೇಯಾಂಕದ ನಡಾಲ್ ಆಸ್ಟ್ರೇಲಿಯದ ಜಾನ್ ಮಿಲ್‌ಮ್ಯಾನ್‌ರನ್ನು ಎದುರಿಸುವುದರೊಂದಿಗೆ ಪ್ರಶಸ್ತಿ ಬೇಟೆ ಆರಂಭಿಸಲಿದ್ದಾರೆ.

ಮರ್ರೆ ಗಾಯದ ಸಮಸ್ಯೆಯೊಂದಿಗೆ ಟೂರ್ನಮೆಂಟ್‌ನ್ನು ಪ್ರವೇಶಿಸುತ್ತಿದ್ದು, ಕಳೆದ ವಾರ ನಡೆದಿದ್ದ ಕ್ವೀನ್ಸ್ ಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದರು. ಒಂದು ವೇಳೆ ಮರ್ರೆ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದರೆ ಮೂರನೆ ಸುತ್ತಿನಲ್ಲಿ ಪೋರ್ಚುಗಲ್‌ನ ಜೊವೊ ಸೌಸಾರನ್ನು ಎದುರಿಸುವ ನಿರೀಕ್ಷೆಯಿದೆ.

ಫೆಡರರ್ ಅಂತಿಮ-16ರ ಸುತ್ತಿನಲ್ಲಿ ಗ್ರಿಗೊರ್ ಡಿಮಿಟ್ರೊವ್‌ರನ್ನು, ಕ್ವಾರ್ಟರ್ ಫೈನಲ್‌ನಲ್ಲಿ ಮಿಲಾಸ್ ರಾವೊನಿಕ್ ಅಥವಾ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸುವ ಸಾಧ್ಯತೆಯಿದೆ. ಇದೇ ವೇಳೆನಡಾಳ್ ಅವರು ಅಂತಿಮ-16ರಲ್ಲಿ ಗಿಲ್ಲೆಸ್ ಮಿಲ್ಲರ್‌ರನ್ನು, ಅಂತಿಮ-8ರ ಸುತ್ತಿನಲ್ಲಿ ಜಪಾನ್‌ನ ಕೀ ನಿಶಿಕೊರಿ ಅಥವಾ ಮಾಜಿ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್‌ರನ್ನು ಎದುರಿಸುವ ನಿರೀಕ್ಷೆಯಿದೆ.

ನಡಾಲ್ ಹಾಗೂ ಫೆಡರರ್ 2006, 2007 ಹಾಗೂ 2008ರ ಬಳಿಕ ನಾಲ್ಕನೆ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯೂ ಇದೆ. 9 ವರ್ಷಗಳ ಹಿಂದೆ ನಡೆದಿದ್ದ ಫೈನಲ್‌ನಲ್ಲಿ ಸ್ಪೇನ್‌ನ ನಡಾಲ್ ಸುಮಾರು ಐದು ಗಂಟೆಗಳ ಮ್ಯಾರಥಾನ್ ಪಂದ್ಯದಲ್ಲಿ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಹಾಗೂ ಮಾಜಿ ಚಾಂಪಿಯನ್ ಮರಿಯಾ ಶರಪೋವಾ ಈಬಾರಿ ಆಡುತ್ತಿಲ್ಲ. ಈ ಬಾರಿಯ ಟೂರ್ನಿಯು ಅತ್ಯಂತ ಮುಕ್ತವಾಗಿದ್ದು,ಯಾರೂ ಕೂಡ ಚಾಂಪಿಯನ್ ಆಗಬಹುದು.

ಅಗ್ರ ಶ್ರೇಯಾಂಕದ ಆ್ಯಂಜೆಲಿಕ್ ಕೆರ್ಬರ್ ಅಂತಿಮ 8ರಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ವೆತ್ಲಾನಾ ಕುಝ್ನೆಸೋವಾರನ್ನು ಎದುರಿಸುವ ಸಾಧ್ಯತೆಯಿದೆ. ದ್ವಿತೀಯ ಶ್ರೇಯಾಂಕದ ಸಿಮೊನಾ ಹಾಲೆಪ್ ಬ್ರಿಟನ್‌ನ ಜೊಹನ್ನಾ ಕಾಂಟಾರನ್ನು ಎದುರಿಸುವ ಸಾಧ್ಯತೆಯಿದೆ. ಆದರೆ,ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾಂಟಾ ಟೂರ್ನಿಯಲ್ಲಿ ಭಾಗವಹಿಸುವುದು ಇನ್ನೂ ದೃಢಪಟ್ಟಿಲ್ಲ.

ಝೆಕ್‌ನ ಕರೊಲಿನಾ ಪ್ಲಿಸ್ಕೊವಾ-ಕರೊಲಿನಾ ವೋಝ್ನಿಯಾಕಿ, ಎಲಿನಾ ಸ್ವಿಟೊಲಿನಾ-ಡೊಮಿನಿಕಾ ಸಿಬುಲ್ಕೋವಾ ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸಾಡುವ ಸಾಧ್ಯತೆಯಿದೆ.

ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ ಬೆಲ್ಜಿಯಂನ ಎಲಿಸ್ ಮೆರ್ಟಿನ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ವಿಕ್ಟೋರಿಯ ಅಝರೆಂಕಾ ಹಾಗೂ ಪೆಟ್ರಾ ಕ್ವಿಟೋವಾ ಕ್ರಮವಾಗಿ ಅಮೆರಿಕದ ಬೆಲ್ಲಿಸ್ ಹಾಗೂ ಸ್ವೀಡನ್‌ನ ಜೊಹನ್ನಾ ಲಾರ್ಸನ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News