×
Ad

ಜು.2: ಭಾರತ-ಪಾಕ್ ಸೆಣಸಾಟ

Update: 2017-07-01 23:26 IST

ಡರ್ಬಿ, ಜು.1: ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ತಂಡ ರವಿವಾರ ನಡೆಯಲಿರುವ ತನ್ನ ಮೂರನೆ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿರುವ ಭಾರತ ತಂಡ ಪಾಕ್ ವಿರುದ್ಧ ವೂ ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದು, ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ.

 ಭಾರತ ಕಳೆದ ನಾಲ್ಕು ಏಕದಿನ ಸರಣಿಗಳನ್ನು ಸುಲಭವಾಗಿ ಗೆದ್ದುಕೊಂಡಿದೆ. ಮೊದಲಿಗೆ ಸ್ವದೇಶದಲ್ಲಿ ಶ್ರೀಲಂಕಾ, ವೆಸ್ಟ್‌ಇಂಡೀಸ್ ವಿರುದ್ಧ್ದ ಸರಣಿ ಜಯಿಸಿದ್ದ ಭಾರತ ದಕ್ಷಿಣ ಆಫ್ರಿಕ ತಂಡವನ್ನು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ ಹಾಗೂ ಚತುರ್ದಿನ ಸರಣಿಯಲ್ಲಿ ಮಣಿಸಿತ್ತು.

ವಿಶ್ವಕಪ್‌ನಲ್ಲೂ ಉತ್ತಮ ಫಾರ್ಮ್ ಮುಂದುವರಿಸಿದ್ದ ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಜಯಿಸಿತ್ತು.

ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 35 ರನ್‌ಗಳಿಂದ ಮಣಿಸಿದ್ದ ಭಾರತ ಶುಭಾರಂಭ ಮಾಡಿತ್ತು. ತನ್ನ 2ನೆ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ್ನು ಏಳು ವಿಕೆಟ್‌ಗಳ ಅಂತರದಿಂದ ಸೋಲಿಸಿತ್ತು.

ಸಾನಾ ಮಿರ್ ನೇತೃತ್ವದ ಪಾಕ್ ತಂಡ ಟೂರ್ನಮೆಂಟ್‌ನಲ್ಲಿ ಇನ್ನಷ್ಟೇ ಗೆಲುವಿನ ಸವಿ ಉಣಬೇಕಾಗಿದೆ. ದಕ್ಷಿಣ ಆಫ್ರಿಕ ವಿರುದ್ಧ 3 ವಿಕೆಟ್‌ಗಳಿಂದ ಸೋತಿದ್ದ ಪಾಕ್ ತಂಡ ಇಂಗ್ಲೆಂಡ್‌ನ ವಿರುದ್ಧ ಡಿಎಲ್ ನಿಯಮದ ಪ್ರಕಾರ 107 ರನ್‌ಗಳ ಅಂತರದಿಂದ ಸೋತಿತ್ತು.

ಭಾರತದ ಆಟಗಾರ್ತಿಯರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಎದುರಾಳಿ ತಂಡವನ್ನು ಕೇವಲ 183 ರನ್‌ಗೆ ನಿಯಂತ್ರಿಸಿದ್ದರು.

ತ್ರಿವಳಿ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮ(2-27), ಪೂನಂ ಯಾದವ್(2-19) ಹಾಗೂ ಹರ್ಮನ್‌ಪ್ರೀತ್ ಕೌರ್(2-42) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ವೇಗದ ಬೌಲರ್ ಜುಲನ್ ಗೋಸ್ವಾಮಿ ಟೂರ್ನಿಯಲ್ಲಿ ಬೌಲಿಂಗ್ ನೇತೃತ್ವ ವಹಿಸಿದ್ದರೂ ಈತನಕ ವಿಕೆಟ್‌ಗಳನ್ನು ಪಡೆಯಲು ಸಫಲರಾಗಿಲ್ಲ.

ಬ್ಯಾಟಿಂಗ್ ವಿಭಾಗದಲ್ಲಿ ಸ್ಮತಿ ಮಂಧಾನ ಜೀವನಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ.ಎಡಗೈ ಆಟಗಾರ್ತಿ ಮಂಧಾನ ಇಂಗ್ಲೆಂಡ್ ವಿರುದ್ಧ 90ರನ್ ಗಳಿಸಿದ್ದರೆ, ವಿಂಡೀಸ್ ವಿರುದ್ಧ ಕೇವಲ 108 ಎಸೆತಗಳಲ್ಲಿ 106 ರನ್ ಗಳಿಸಿ ಭಾರತದ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟರು. ಟೂರ್ನಿಯಲ್ಲಿ ಆಡಿರುವ ಎರಡೇ ಪಂದ್ಯಗಳಲ್ಲಿ 196 ರನ್ ಗಳಿಸಿದ್ದಾರೆ.

ನಾಯಕಿ ಮಿಥಾಲಿ ರಾಜ್ ಕೂಡ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ. ರಾಜ್ ಸತತ ಏಳನೆ ಅರ್ಧಶತಕ ಸಿಡಿಸಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ಕೇವಲ 4 ರನ್‌ನಿಂದ ಅರ್ಧಶತಕ ವಂಚಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News