ಮಾಲಿಂಗಗೆ ಜ್ವರ: ಎರಡನೆ ಏಕದಿನಕ್ಕೆ ಅಲಭ್ಯ
ಕೊಲಂಬೊ,ಜು.1: ಶ್ರೀಲಂಕಾದ ವಿವಾದಾತ್ಮಕ ವೇಗದ ಬೌಲರ್ ಲಸಿತ್ ಮಾಲಿಂಗ ತೀವ್ರ ಜ್ವರದಿಂದ ಬಳಲುತ್ತಿದ್ದು, ರವಿವಾರ ನಡೆಯಲಿರುವ ಝಿಂಬಾಬ್ವೆ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಿಂದ ಹೊರಗುಳಿದಿದ್ದಾರೆ.
ವೈದ್ಯಕೀಯ ವರದಿಯನ್ನು ಆಧರಿಸಿ ಮಾಲಿಂಗ ಎರಡನೆ ಪಂದ್ಯದಿಂದ ಹೊರಗುಳಿದಿದ್ದು, ವೈದ್ಯರು 48 ಗಂಟೆಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
33ರ ಪ್ರಾಯದ ಮಾಲಿಂಗ ಶುಕ್ರವಾರ ನಡೆದಿದ್ದ ಝಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ 51 ರನ್ ನೀಡಿ ಕೇವಲ 1 ವಿಕೆಟ್ ಪಡೆದಿದ್ದರು.
ರಾಷ್ಟ್ರೀಯ ಆಟಗಾರರು ತುಂಬಾ ದಪ್ಪಗಾಗಿದ್ದು ಅನ್‌ಫಿಟ್ ಇದ್ದಾರೆಂದು ಕ್ರೀಡಾಸಚಿವ ದಯಸಿರಿ ಜಯಸೇಕರ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾದ ಕಳಪೆ ಪ್ರದರ್ಶನವನ್ನು ಉಲ್ಲೇಖಿಸಿ ಟೀಕಿಸಿದ್ದರು. 80 ಕೆಜಿ ತೂಕವಿರುವ ಮಾಲಿಂಗ ಸಚಿವರ ಈ ಹೇಳಿಕೆಯಿಂದ ಕೆರಳಿದ್ದು, ಸಚಿವರನ್ನು ಮಂಗನಿಗೆ ಹೋಲಿಕೆ ಮಾಡಿ ವಿವಾದಕ್ಕೆ ಸಿಲುಕಿದ್ದರು.