ಮ್ಯಾನೇಜರ್ ವರದಿಯಲ್ಲಿ ಕೊಹ್ಲಿಗೆ ಕ್ಲೀನ್‌ಚಿಟ್

Update: 2017-07-02 17:09 GMT

ಹೊಸದಿಲ್ಲಿ, ಜು.2: ಚಾಂಪಿಯನ್ಸ್ ಟ್ರೋಫಿಯ ಬಳಿಕ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಭಿನ್ನಾಭಿಪ್ರಾಯ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ತಂಡದ ಮ್ಯಾನೇಜರ್ ಕಪಿಲ್ ಮಲ್ಹೋತ್ರಾ ಬಿಸಿಸಿಐಗೆ ನೀಡಿರುವ ವರದಿಯಲ್ಲಿ ವಿರಾಟ್ ಕೊಹ್ಲಿಗೆ ಕ್ಲೀನ್‌ಚಿಟ್ ನೀಡಿದ್ದಾರೆ.

ಸ್ವದೇಶ ಹಾಗೂ ವಿದೇಶದಲ್ಲಿ ನಡೆಯಲಿರುವ ಸರಣಿಯ ಬಳಿಕ ಆಡಳಿತ ವ್ಯವಸ್ಥಾಪಕರು ವರದಿಯನ್ನು ನೀಡುವುದು ಕಡ್ಡಾಯವಾಗಿದೆ.

 ಕುಂಬ್ಳೆ ದಿಢೀರನೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮಲ್ಹೋತ್ರಾರಿಗೆ ವರದಿ ಸಲ್ಲಿಸುವಂತೆ ವಿಶೇಷ ಸೂಚನೆ ನೀಡಿತ್ತು. ಇಂಗ್ಲೆಂಡ್ ಪ್ರವಾಸದ ವೇಳೆ ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂದು ವರದಿಯಾಗಿತ್ತು.

ಕಪಿಲ್ ಮಲ್ಹೋತ್ರಾ ತನ್ನ ವರದಿಯನ್ನು ಸಲ್ಲಿಸಿದ್ದಾರೆ. ವಿರಾಟ್‌ಕೊಹ್ಲಿ ಕೋಚ್‌ರೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವುದು ಹಾಗೂ ಶಿಸ್ತನ್ನು ಉಲ್ಲಂಘಿಸುವಂತಹ ಘಟನೆ ನಡೆದಿರುವ ಬಗ್ಗೆ ವರದಿಯಲ್ಲಿ ನಮೂದಿಸಲಾಗಿಲ್ಲ. ಡ್ರೆಸ್ಸಿಂಗ್ ರೂಮ್ ವಾತಾವರಣ ಕೆಡಿಸುವಂತಹ, ತಂಡದ ನೈತಿಕತೆ ಧಕ್ಕೆ ಬರುವಂತಹ ಯಾವುದೇ ಘಟನೆಯ ಬಗ್ಗೆ ವರದಿಯಲ್ಲಿ ಪ್ರಸ್ತಾವವಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ತಂಡ ಸ್ವದೇಶದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸಂದರ್ಭದಲ್ಲಿ ತಂಡದ ಮ್ಯಾನೇಜರ್ ಆಗಿದ್ದ ಅನಿಲ್ ಪಟೇಲ್‌ಗೆ ವರದಿ ಸಲ್ಲಿಸುವಂತೆ ಬಿಸಿಸಿಐ ಸೂಚಿಸಿತ್ತು.

ಮಲ್ಹೋತ್ರಾ ಪ್ರಸ್ತುತ ಭಾರತ ತಂಡದೊಂದಿಗೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News