×
Ad

ವಿಂಬಲ್ಡನ್ ಟೂರ್ನಿ: ನಿಶಿಕೊರಿ, ಸೋಂಗ ಶುಭಾರಂಭ

Update: 2017-07-03 23:30 IST

ಲಂಡನ್,ಜು.3: ವರ್ಷದ ಮೂರನೆ ಗ್ರಾನ್‌ಸ್ಲಾಮ್ ಟೂರ್ನಿ ವಿಂಬಲ್ಡನ್ ಸೋಮವಾರ ಇಲ್ಲಿ ಆರಂಭವಾಗಿದ್ದು ಜಪಾನ್ ಕೀ ನಿಶಿಕೊರಿ ಹಾಗೂ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ ಶುಭಾರಂಭ ಮಾಡಿದ್ದಾರೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಿಶಿಕೊರಿ ಇಟಲಿಯ ಮಾರ್ಕೊ ಸೆಸ್ಚಿನಾಟೊರನ್ನು 6-2, 6-2, 6-0 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಮೊದಲ ಬಾರಿ ಹಿರಿಯ ಶ್ರೇಣಿಯ ಪಂದ್ಯದಲ್ಲಿ ಆಡಿರುವ ಇಟಲಿ ಆಟಗಾರನನ್ನು ನಿಶಿಕೊರಿ ಸುಲಭವಾಗಿ ಮಣಿಸಿದರು. ಉತ್ತಮ ಪ್ರದರ್ಶನ ನೀಡಿದ ನಿಶಿಕೊರಿ ತನಗೆ ವೀರೋಚಿತ ಸ್ವಾಗತ ನೀಡಿದ ಜಪಾನ್ ಅಭಿಮಾನಿಗಳನ್ನು ಸಂತೋಷಪಡಿಸಿದರು.

ಇತ್ತೀಚೆಗಿನ ದಿನಗಳಲ್ಲಿ ಗಾಯದ ಸಮಸ್ಯೆಯನ್ನು ಎದುರಿಸುತ್ತಾ ಬಂದಿರುವ ನಿಶಿಕೊರಿ ಈ ಪಂದ್ಯದಲ್ಲಿ ಯಾವುದೇ ಸಮಸ್ಯೆಯನ್ನು ತೋರ್ಪಡಿಸಲಿಲ್ಲ.

ಎರಡು ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಜೋ-ವಿಲ್ಫ್ರೆಡ್ ಸೋಂಗ ಬ್ರಿಟನ್‌ನ ವೈರ್ಲ್ಡ್‌ಕಾರ್ಡ್ ಆಟಗಾರ ಕ್ಯಾಮರೊನ್ ನೊರ್ರಿ ಅವರನ್ನು 6-3, 6-2, 6-2 ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಎರಡನೆ ಸುತ್ತಿಗೇರಿದ್ದಾರೆ.

12ನೆ ಶ್ರೇಯಾಂಕದ ಸೋಂಗ ಕಳೆದ ವರ್ಷ ಈ ಟೂರ್ನಿಯಲ್ಲಿ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು.

ಒಂದು ಗಂಟೆ, 23 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಸಂಜಾತ ನೊರ್ರಿ ಮೊದಲ ಸೆಟ್‌ನಲ್ಲಿ ಒಂದಷ್ಟು ಹೋರಾಟವನ್ನು ನೀಡಿದರೂ 3-6ರಿಂದ ಸೋತರು. ಎರಡು ಹಾಗೂ ಮೂರನೆ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ಸೋಂಗ 6-2, 6-2 ಸೆಟ್‌ಗಳಿಂದ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News