×
Ad

ಭಾರತದ ಮುಖ್ಯ ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಅರ್ಜಿ

Update: 2017-07-03 23:44 IST

ಹೊಸದಿಲ್ಲಿ,ಜು.4: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಸೋಮವಾರ ಭಾರತದ ಮುಖ್ಯ ಕೋಚ್ ಹುದ್ದೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ಜು.9 ಕೊನೆಯ ದಿನವಾಗಿದ್ದು, ಶಾಸ್ತ್ರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಜು.10 ರಂದು ಮುಂಬೈನಲ್ಲಿ ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡುಲ್ಕರ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಅಭ್ಯರ್ಥಿಗಳ ಸಂದರ್ಶನ ನಡೆಸುತ್ತದೆ.

ವೆಸ್ಟ್‌ಇಂಡೀಸ್‌ನ ಮಾಜಿ ಮುಖ್ಯ ಕೋಚ್ ಹಾಗೂ ಐರ್ಲೆಂಡ್, ಅಫ್ಘಾನಿಸ್ತಾನ ತಂಡಗಳಿಗೆ ಸಲಹಾಗಾರರಾಗಿದ್ದ ಫಿಲ್ ಸಿಮೊನ್ಸ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಶಾಸ್ತ್ರಿ ತಂಡಕ್ಕೆ ವಾಪಸಾಗುವುದನ್ನು ಬಯಸುತ್ತಿದ್ದು, ಮುಖ್ಯ ಕೋಚ್ ಹುದ್ದೆಗೆ ಶಾಸ್ತ್ರಿ ಫೇವರಿಟ್ ಆಗಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.

ಶಾಸ್ತ್ರಿ 2014 ಹಾಗೂ 2016ರ ನಡುವೆ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದರು. ಶಾಸ್ತ್ರಿ ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿ ಭಾರತ 2015ರ ಐಸಿಸಿ ವಿಶ್ವಕಪ್, 2016ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿತ್ತು. 22 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕವನ್ನು 3-0 ಅಂತರದಿಂದ ಮಣಿಸಿತ್ತು. ಆ ಬಳಿಕ ಏಷ್ಯಾಕಪ್‌ನ್ನು ಗೆದ್ದುಕೊಂಡಿತ್ತು. ಶಾಸ್ತ್ರಿ ಕಳೆದ ವರ್ಷ ಕೂಡ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನಿಲ್ ಕುಂಬ್ಳೆಯನ್ನು ಆಯ್ಕೆ ಮಾಡಲಾಗಿತ್ತು.
ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ವೆಂಕಟೇಶ್ ಪ್ರಸಾದ್, ರಿಚರ್ಡ್ ಪೈಬಸ್, ದೊಡ್ಡ ಗಣೇಶ್ ಹಾಗೂ ಲಾಲ್‌ಚಂದ್ ರಾಜ್‌ಪೂತ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News