ವೀನಸ್, ಸಿಮೊನಾ ದ್ವಿತೀಯ ಸುತ್ತಿಗೆ ಲಗ್ಗೆ

Update: 2017-07-03 18:18 GMT

ಲಂಡನ್,ಜು.3: ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಹಾಗೂ ರೊಮಾನಿಯದ ಸಿಮೊನಾ ಹಾಲೆಪ್ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ವೀನಸ್ ಅವರು ಎಲಿಸ್ ಮಾರ್ಟನ್ಸ್‌ರನ್ನು 7-6(9/7), 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

1997ರಲ್ಲಿ ವೀನಸ್ ವಿಂಬಲ್ಡನ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದಾಗ 21ರ ಹರೆಯದ ಮಾರ್ಟನ್ಸ್‌ಗೆ 1 ವರ್ಷವಾಗಿತ್ತು. 54ನೆ ರ್ಯಾಂಕಿನ ಮಾರ್ಟಿನ್ಸ್‌ಗೆ ಇದು ಚೊಚ್ಚಲ ವಿಂಬಲ್ಡನ್ ಟೂರ್ನಿಯಾಗಿದೆ. ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಏಳು ಬಾರಿ ಚಾಂಪಿಯನ್ ಆಗಿರುವ ವೀನಸ್ ಕಳೆದ ವರ್ಷ ಸೆಮಿ ಫೈನಲ್‌ಗೆ ತಲುಪಿದ್ದರು.

ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿರುವ ವೀನಸ್ ಮುಂದಿನ ಸುತ್ತಿನಲ್ಲಿ ಚೀನಾದ ವಾಂಗ್ ಕ್ವಿಯಾಂಗ್‌ರನ್ನು ಎದುರಿಸಲಿದ್ದಾರೆ.
ಇದೇ ವೇಳೆ, ರೊಮಾನಿಯದ 2ನೆ ಶ್ರೇಯಾಂಕದ ಆಟಗಾರ್ತಿ ಸಿಮೊನಾ ಹಾಲೆಪ್ ಅಂತಿಮ 64ರ ಸುತ್ತು ತಲುಪಿದ್ದಾರೆ. ಹಾಲೆಪ್ ನ್ಯೂಝಿಲೆಂಡ್‌ನ ಕ್ವಾಲಿಫೈಯರ್ ಮರಿನಾ ಎರಾಕೊವಿಕ್‌ರನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
2014ರಲ್ಲಿ ನಡೆದ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿರುವ, ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಆಗಿರುವ ಹಾಲೆಪ್ ಮುಂದಿನ ಸುತ್ತಿನಲ್ಲಿ ಬ್ರೆಝಿಲ್‌ನ ಬಿಟ್ರಿಝ್ ಮರಿಯಾ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News