ಅಝೆರೆಂಕಾ ಗೆಲುವಿನ ಆರಂಭ
Update: 2017-07-04 23:10 IST
ಲಂಡನ್, ಜು.4: ಡಿಸೆಂಬರ್‌ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯನ್ನು ಆಡಿದ ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಶುಭಾರಂಭ ಮಾಡಿದ್ದಾರೆ.
ಸೋಮವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನ ಪಂದ್ಯವನ್ನಾಡಿದ ಅಝರೆಂಕಾ ವಿಶ್ವದ ನಂ.40ನೆ ರ್ಯಾಂಕಿನ ಅಮೆರಿಕದ ಆಟಗಾರ್ತಿ ಸಿಸಿ ಬೆಲ್ಲಿಸ್‌ರನ್ನು 3-6, 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
2016ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಂಡ ಬಳಿಕ ಅಝರೆಂಕಾ ಇದೀಗ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕಾಣಿಸಿಕೊಂಡರು.
2011 ಹಾಗೂ 2012ರಲ್ಲಿ ವಿಂಬಲ್ಡನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಅಝರೆಂಕಾ ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡು 18ರ ಹರೆಯದ ಆಟಗಾರ್ತಿಯನ್ನು ಮಣಿಸಿದರು.
2012 ಹಾಗೂ 2013ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ಅಝರೆಂಕಾ ಕಳೆದ ತಿಂಗಳು ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು.