ಭಾರವಾದ ಹೃದಯ, ನೆನಪುಗಳ ಮೂಟೆಯೊಂದಿಗೆ ವಿಂಬಲ್ಡನ್‌ಗೆ ವಿದಾಯ ಹೇಳಿದ ಹಾಸ್

Update: 2017-07-04 17:48 GMT

ಲಂಡನ್,ಜು.4: ಈ ವರ್ಷ ರೋಜರ್ ಫೆಡರರ್‌ರನ್ನು ಮಣಿಸಿದ್ದ ಜರ್ಮನಿಯ 39ರ ಪ್ರಾಯದ ಆಟಗಾರ ಟಾಮಿ ಹಾಸ್ ವಿಂಬಲ್ಡನ್ ಟೂರ್ನಿಗೆ ಸಂತೋಷದ ವಿದಾಯ ಹೇಳಬೇಕೆಂಬ ಕನಸು ಕಂಡಿದ್ದರು. ಆದರೆ ಅವರ ಕನಸು ಕೈಗೂಡಲಿಲ್ಲ.

16ನೆ ಹಾಗೂ ಕೊನೆಯ ಬಾರಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಆಡಲು ವೈರ್ಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಹಾಸ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಕ್ವಾಲಿಫೈಯರ್ ರುಬೆನ್ ಬೆಮೆಲ್‌ಮನ್ಸ್ ವಿರುದ್ಧ 6-2, 3-6, 6-3, 7-5 ಅಂತರದಿಂದ ಸೋತಿದ್ದಾರೆ.

1997ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿರುವ ಹಾಸ್ ಟೆನಿಸ್ ಅಂಗಣಕ್ಕೆ ಇಳಿಯುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವಿಸಿದರು.

ಹೌದು, ನನ್ನಲ್ಲಿ ಸಾಕಷ್ಟು ನೆನಪುಗಳಿವೆ. ಮೊದಲ ಸುತ್ತಿನಲ್ಲೇ ಸೋತಿದ್ದಕ್ಕೆ ಬೇಸರವಾಗಿದೆ. ಟೆನಿಸ್ ಅಂಗಣಕ್ಕೆ ವಾಪಸಾಗಿ, ನನ್ನ ಕುಟುಂಬ, ಮಕ್ಕಳ ಎದುರು ಆಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹಾಸ್ ನುಡಿದರು.

21 ವರ್ಷಗಳ ಕಾಲ ವೃತ್ತಿಪರ ಟೆನಿಸ್ ಆಡಿರುವ ಹಾಸ್ ಲೆಕ್ಕವಿಲ್ಲದ್ದಷ್ಟು ಸರ್ಜರಿಗೆ ಒಳಗಾಗಿದ್ದಾರೆ. ಹಲವು ಬಾರಿ ಭುಜ, ಮೊಣಕೈ ಹಾಗೂ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News