ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ವಿಕಾಸ್ ಗೌಡಗೆ ಅವಕಾಶ

Update: 2017-07-04 18:05 GMT

ಭುವನೇಶ್ವರ,ಜು.4: ಹಾಲಿ ಚಾಂಪಿಯನ್, ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಗುರುವಾರ ಇಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಕುರಿತಂತೆ ಇದ್ದ ಎಲ್ಲ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ. ರಾಷ್ಟ್ರೀಯ ಫೆಡರೇಶನ್ ಸಾಕಷ್ಟು ಚರ್ಚೆ ನಡೆಸಿದ ಬಳಿಕ ಕೊನೆಯ ಕ್ಷಣದಲ್ಲಿ ಕನ್ನಡಿಗ ವಿಕಾಸ್ ಗೌಡರಿಗೆ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿದೆ.

ಕಳಿಂಗ ಸ್ಟೇಡಿಯಂನಲ್ಲಿ ಟ್ರಯಲ್‌ನಲ್ಲಿ ನಿರತರಾಗಿದ್ದ ಮುಂಬೈ ಕನ್ನಡಿಗ ಸಿದ್ದಾಂತ್ ತಿಂಗಳಾಯ(110 ಮೀ. ಹರ್ಡಲ್ಸ್) ಕೂಡ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ 34ರ ಹರೆಯದ ವಿಕಾಸ್ ಪ್ರಸ್ತುತ ಆವೃತ್ತಿಯಲ್ಲಿ ಹ್ಯಾಟ್ರಿಕ್ ಚಿನ್ನ ಪಡೆಯಲು ಎದುರು ನೋಡುತ್ತಿದ್ದಾರೆ. 2013ರಲ್ಲಿ ಪುಣೆಯಲ್ಲಿ ನಡೆದ ಟೂರ್ನಿ ಹಾಗೂ 2015ರಲ್ಲಿ ಚೀನಾದ ವುಹಾನ್‌ನಲ್ಲಿ ನಡೆದ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 2005ರಲ್ಲಿ ಇಂಚೋನ್(ಕೊರಿಯಾ) ಹಾಗೂ 2011ರಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

22ನೆ ಆವೃತ್ತಿಯ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿರುವ ಭಾರತ 46 ಮಹಿಳೆಯರು ಸೇರಿದಂತೆ ಒಟ್ಟು 95 ಸದಸ್ಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News