×
Ad

ವಿಂಬಲ್ಡನ್: ಮರ್ರೆ, ನಡಾಲ್, ವೀನಸ್ ಮೂರನೆ ಸುತ್ತಿಗೆ ಲಗ್ಗೆ

Update: 2017-07-06 23:31 IST

ಲಂಡನ್, ಜು.6: ಆ್ಯಂಡಿ ಮರ್ರೆ, ರಫೆಲ್ ನಡಾಲ್ ಹಾಗೂ ವೀನಸ್ ವಿಲಿಯಮ್ಸ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಮಾಜಿ ಚಾಂಪಿಯನ ಪೆಟ್ರಾ ಕ್ವಿಟೋವಾ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

ವಿಶ್ವದ ನಂ.1 ಆಟಗಾರ ಮರ್ರೆ ಸೆಂಟರ್‌ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ ಡಸ್ಟಿನ್ ಬ್ರೌನ್‌ರನ್ನು 6-3, 6-2, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಇಟಲಿಯ 28ನೆ ಶ್ರೇಯಾಂಕದ ಫ್ಯಾಬಿಯೊ ಫೊಗ್ನಿನಿ ಅವರನ್ನು ಎದುರಿಸಲಿದ್ದಾರೆ.

ಐತಿಹಾಸಿಕ 10ನೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿರುವ 4ನೆ ಶ್ರೇಯಾಂಕದ ನಡಾಲ್ ಎಡಗೈ ಆಟಗಾರ ಅಮೆರಿಕದ ಡೊನಾಲ್ಡ್ ಯಂಗ್‌ರನ್ನು 6-4, 6-2, 7-5 ಸೆಟ್‌ಗಳಿಂದ ಮಣಿಸಿದ್ದಾರೆ. ಮೂರನೆ ಸುತ್ತಿನಲ್ಲಿ ರಶ್ಯದ 30ನೆ ಶ್ರೇಯಾಂಕದ ಕರೆನ್ ಖಚಾನೊವ್‌ರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್, ಫೇವರಿಟ್ ಹಣೆಪಟ್ಟಿ ಹೊಂದಿರುವ ಪೆಟ್ರಾ ಕ್ವಿಟೋವಾ ಅಮೆರಿಕದ ಮ್ಯಾಡಿಸನ್ ಬ್ರೆಂಗ್ಲೆ ವಿರುದ್ಧ 6-3, 1-6, 6-2 ಸೆಟ್‌ಗಳಿಂದ ಸೋತು ಆಘಾತ ಅನುಭವಿಸಿದ್ದಾರೆ.

ತನ್ನ ಮನೆಯಲ್ಲೇ ದರೋಡೆಕೋರನಿಂದ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣ ಚೇತರಿಸಿಕೊಂಡಿರುವ ಕ್ವಿಟೋವಾ ಸಕ್ರಿಯ ಟೆನಿಸ್‌ಗೆ ವಾಪಸಾದ ನಂತರ ಆಡಿರುವ ಎರಡನೆ ಗ್ರಾನ್‌ಸ್ಲಾಮ್ ಟೂರ್ನಿಯ ಇದಾಗಿತ್ತು.

ಅಮೆರಿಕದ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ ಚೀನಾದ ಉದಯೋನ್ಮುಖ ಸ್ಟಾರ್ ಆಟಗಾರ ವಾಂಗ್ ಕ್ವಿಯಾಂಗ್ ವಿರುದ್ದ ಆರಂಭಿಕ ಸೆಟ್ ಸೋಲಿನಿಂದ ಚೇತರಿಸಿಕೊಂಡು 4-6, 6-4, 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಇತ್ತೀಚೆಗೆ ಫ್ಲೋರಿಡಾದಲ್ಲಿ ನಡೆದ ಕಾರು ಅಪಘಾತಕ್ಕೆ ಸಂಬಂಧಿಸಿ ಪ್ರಕರಣ ಎದುರಿಸುತ್ತಿರುವ ವೀನಸ್ ವೈಯಕ್ತಿಕ ಸಮಸ್ಯೆಯನ್ನು ಬದಿಗಿಟ್ಟು ಟೆನಿಸ್‌ನತ್ತ ಗಮನ ಹರಿಸಿದರು. ಮುಂದಿನ ಸುತ್ತಿನಲ್ಲಿ ಜಪಾನ್‌ನ ನಾಯೊಮಿ ಒಸಾಕಾರನ್ನು ಎದುರಿಸಲಿದ್ದಾರೆ.

ಸ್ಥಳೀಯ ಆಟಗಾರ್ತಿ, ಆರನೆ ಶ್ರೇಯಾಂಕದ ಜೋಹನ್ನಾ ಕಾಂಟಾ ಮ್ಯಾರಥಾನ್ ಪಂದ್ಯದಲ್ಲಿ ಡೊನ್ನಾ ವೆಕಿಕ್‌ರನ್ನು 7-6(8/6), 4-6, 10-8 ಸೆಟ್‌ಗಳ ಅಂತರದಿಂದ ಮಣಿಸಿ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಮೂರನೆ ಸುತ್ತು ತಲುಪಿದ್ದಾರೆ.

ಬ್ರಿಟನ್‌ನ ನಾಲ್ವರು ಆಟಗಾರರಾದ ಕಾಂಟಾ, ವ್ಯಾಟ್ಸನ್,ಮರ್ರೆ ಹಾಗೂ ಅಲ್‌ಜಾಝ್ ಬೆಡೆನ್ ಮೂರನೆ ಸುತ್ತಿಗೆ ತಲುಪಿದ್ದಾರೆ. 1997ರ ಬಳಿಕ ಬ್ರಿಟನ್‌ನ ನಾಲ್ವರು ಟೆನಿಸ್‌ಪಟುಗಳು ವಿಂಬಲ್ಡನ್‌ನಲ್ಲಿ ಮೂರನೆ ಸುತ್ತು ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News