ಆಸ್ಟ್ರೇಲಿಯ ಎ ತಂಡದಿಂದ ದಕ್ಷಿಣ ಆಫ್ರಿಕ ಪ್ರವಾಸ ಬಹಿಷ್ಕಾರ

Update: 2017-07-06 18:22 GMT

ಸಿಡ್ನಿ, ಜು.6: ಆಸ್ಟ್ರೇಲಿಯ ಆಟಗಾರರು ಹಾಗೂ ಕ್ರಿಕೆಟ್ ಆಸ್ಟ್ರೇಲಿಯ ನಡುವಿನ ವೇತನ ವಿವಾದಕ್ಕೆ ಆಸ್ಟ್ರೇಲಿಯ ಎ ತಂಡದ ದಕ್ಷಿಣ ಆಫ್ರಿಕ ಪ್ರವಾಸ ಬಲಿಯಾಗಿದೆ. ಆಟಗಾರರ ಹೊಸ ವೇತನ ಒಪ್ಪಂದಕ್ಕೆ ಸಹಿ ಬೀಳದ ಹಿನ್ನೆಲೆಯಲ್ಲಿ ಆಟಗಾರರು ಟೂರ್ನಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಆಟಗಾರರ ಯೂನಿಯನ್ ಹಾಗೂ ಕ್ರಿಕೆಟ್ ಆಡಳಿತ ಮಂಡಳಿಯ ನಡುವಿನ ಮಾತುಕತೆ ಸ್ಥಗಿತಗೊಂಡಿದೆ. ಕಳೆದ ತಿಂಗಳು ಆಟಗಾರರ ಐದು ವರ್ಷದ ವೇತನ ಒಪ್ಪಂದ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಸುಮಾರು 230 ಆಟಗಾರರು ನಿರುದ್ಯೋಗಿಗಳಾಗಿದ್ದಾರೆ.

ಆಸ್ಟ್ರೇಲಿಯ ಕ್ರಿಕೆಟಿಗರ ಸಂಸ್ಥೆ(ಎಸಿಎ) ಕಳೆದ ವಾರಾಂತ್ಯದಲ್ಲಿ ಸಿಡ್ನಿಯಲ್ಲಿ ತುರ್ತು ಸಭೆ ಸೇರಿತ್ತು. ಈ ವಾರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕದೇ ಇದ್ದರೆ ಎ ತಂಡದ ದಕ್ಷಿಣ ಆಫ್ರಿಕ ಪ್ರವಾಸವನ್ನು ಬಹಿಷ್ಕರಿಸಲು ಆಸ್ಟ್ರೇಲಿಯದ ಎ ತಂಡದ ಆಟಗಾರರು ಮೊದಲೇ ನಿರ್ಧರಿಸಿದ್ದರು.

ಪ್ರಸ್ತುತ ವೇತನ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಾಣದಿರುವುದು ಬೇಸರದ ವಿಷಯ. ಆಸ್ಟ್ರೇಲಿಯ ಎ ತಂಡದ ಆಟಗಾರರು ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ದೃಢಪಡಿಸಿದ್ದಾರೆ ಎಂದು ಆಟಗಾರರ ಸಂಘಟನೆಯು ಗುರುವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News