ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸೋಮವಾರ ಸಂದರ್ಶನ
ಮುಂಬೈ, ಜು.9: ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮೂವರು ಸದಸ್ಯರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸೋಮವಾರ ಮುಂಬೈನಲ್ಲಿ ಸಭೆ ಸೇರಲಿದೆ. ಕೋಚ್ ಹುದ್ದೆಗೆ ಮಾಜಿ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಪ್ರಬಲ ಸ್ಪರ್ಧಿಯಾಗಿ ಮುಂಚೂಣಿಯಲ್ಲಿದ್ದಾರೆ.
ಬಿಸಿಸಿಐ 10 ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿದೆ. ಅವರುಗಳೆಂದರೆ: ಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ದೊಡ್ಡ ಗಣೇಶ್, ಲಾಲ್‌ಚಂದ್ ರಾಜ್‌ಪೂತ್, ಲ್ಯಾನ್ಸ್ ಕ್ಲೂಸ್ನರ್, ರಾಕೇಶ್ ಶರ್ಮ(ಒಮನ್ ರಾಷ್ಟ್ರೀಯ ತಂಡದ ಕೋಚ್), ಫಿಲ್ ಸಿಮೊನ್ಸ್ ಹಾಗೂ ಉಪೇಂದ್ರನಾಥ್ ಬ್ರಹ್ಮಾಚಾರಿ(ವೃತ್ತಿಯಲ್ಲಿ ಇಂಜಿನಿಯರ್, ಕ್ರಿಕೆಟ್ ಹಿನ್ನೆಲೆಯಿಲ್ಲ).
ಸಿಎಸಿ 10ರಲ್ಲಿ ಆರು ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಶಾಸ್ತ್ರಿ, ಸೆಹ್ವಾಗ್, ಮೂಡಿ, ಸಿಮೊನ್ಸ್, ಪೈಬಸ್ ಹಾಗೂ ರಾಜ್‌ಪೂತ್ ಸಂದರ್ಶನಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯ ಆರಂಭಕ್ಕೆ ಮೊದಲು ರಾಜೀನಾಮೆ ನೀಡಿದ್ದರು. ಕುಂಬ್ಳೆಯಿಂದ ತೆರವಾಗಿರುವ ಸ್ಥಾನ ತುಂಬಲಿರುವ ಕೋಚ್‌ಗೆ ಎರಡು ವರ್ಷ ಗುತ್ತಿಗೆ ನೀಡಲಾಗುತ್ತದೆ.
ಶಾಸ್ತ್ರಿ ಆರಂಭದಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಬಿಸಿಸಿಐ ಜು.9ರ ತನಕ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ ಮಾಡಿದ ಬಳಿಕ ಮಾಜಿ ನಾಯಕ ಶಾಸ್ತ್ರಿ ಅರ್ಜಿ ಸಲ್ಲಿಸಿದ್ದು, ಇದೀಗ ಅವರು ಈ ಹುದ್ದೆಗೆ ಹಾಟ್ ಫೇವರಿಟ್ ಆಗಿದ್ದಾರೆ.
ಸಿಎಸಿ ಸಮಿತಿಯಲ್ಲಿ ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿದ್ದಾರೆ. ಶಾಸ್ತ್ರಿಯ ಬಗ್ಗೆ ಗಂಗುಲಿ ಯಾವ ಅಭಿಪ್ರಾಯ ಹೊಂದಿದ್ದಾರೆಂದು ಗೊತ್ತಿಲ್ಲ. ಕಳೆದ ವರ್ಷ ಸಂದರ್ಶನದ ಬಳಿಕ ಶಾಸ್ತ್ರಿ ಅವರು ಗಂಗುಲಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಾನು ಟೆಲಿ ಕಾನ್ಫರೆನ್ಸ್‌ನ ಮೂಲಕ ಸಂದರ್ಶನಕ್ಕೆ ಹಾಜರಾದಾಗ ಗಂಗುಲಿ ಜಾಗ ಖಾಲಿ ಮಾಡಿದ್ದರು ಎಂದು ಶಾಸ್ತ್ರಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಂಗುಲಿ, ಶಾಸ್ತ್ರಿಯವರು ಸಂದರ್ಶನಕ್ಕೆ ಸ್ವತಹ ಹಾಜರಾಗಬೇಕಾಗಿತ್ತು. ಈ ವಿಷಯದಲ್ಲಿ ಅವರಿಗೆ ಗಂಭೀರತೆ ಇರಬೇಕಾಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದರು.
ಕಿಂಗ್ಸ್ ಇಲೆವೆನ್ ಪಂಜಾಬ್‌ನ ಮೆಂಟರ್ ಆಗಿದ್ದ ಸೆಹ್ವಾಗ್, 2011ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಫೈನಲ್‌ಗೆ ತಲುಪಲು ಹಾಗೂ ಸನ್‌ರೈಸರ್ಸ್ ತಂಡ ಐಪಿಎಲ್ ಚಾಂಪಿಯನ್ ಆಗಲು ಮಾರ್ಗದರ್ಶನ ನೀಡಿದ್ದ ಟಾಮ್ ಮೂಡಿ ಕೂಡ ಕೋಚ್ ರೇಸ್‌ನಲ್ಲಿದ್ದಾರೆ. ಸಿಮೊನ್ಸ್‌ಗೆ ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿಗೆ ಕೋಚ್ ನೀಡಿರುವ ಅನುಭವವಿದೆ.