×
Ad

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಅರ್ಚನಾ, ಸ್ವಪ್ನಾಗೆ ಸ್ವರ್ಣ ಸಂಭ್ರಮ

Update: 2017-07-09 23:36 IST

ಭುವನೇಶ್ವರ, ಜು.9: ಭಾರತದ ಓಟಗಾರ್ತಿ ಅರ್ಚನಾ ಅಧವ್ ಹಾಗೂ ಹೆಪ್ಟಾಥ್ಲೀಟ್ ಸ್ವಪ್ನಾ ಬರ್ಮನ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ರವಿವಾರ ಚಿನ್ನದ ಪದಕ ಜಯಿಸಿದ್ದಾರೆ.

ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ರವಿವಾರ ನಡೆದ ಮಹಿಳೆಯರ 800 ಮೀ. ಸ್ಪರ್ಧೆಯಲ್ಲಿ ಅರ್ಚನಾ ಮೊದಲ ಸ್ಥಾನ ಪಡೆದರೆ, ಸ್ವಪ್ನಾ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಈ ಸಾಧನೆ ಮೂಲಕ ಈ ಇಬ್ಬರು ಅಥ್ಲೀಟ್‌ಗಳು ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅರ್ಹತೆ ಪಡೆದಿದ್ದಾರೆ.

ಒಟ್ಟು 23 ಪದಕಗಳನ್ನು ಜಯಿಸಿರುವ ಭಾರತ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಶ್ರೇಷ್ಠ ಪ್ರದರ್ಶನ ನೀಡಿದೆ. 1989ರ ಆವೃತ್ತಿಯಲ್ಲಿ 22 ಪದಕಗಳನ್ನು ಜಯಿಸಿ ಉತ್ತಮ ಸಾಧನೆ ಮಾಡಿತ್ತು.

800 ಮೀ.ಓಟದ ಸ್ಪರ್ಧೆಯಲ್ಲಿ 2:05.00 ಸೆಕೆಂಡ್‌ನಲ್ಲಿ ಗುರಿ ತಲುಪಿದ ಅರ್ಚನಾ ಮೊದಲ ಸ್ಥಾನ ಪಡೆದರೆ, ಶ್ರೀಲಂಕಾದ ನಿರ್ಮಲಾ(2:05.23 ಸೆ.) ಹಾಗೂ ಗಾಯಂತಿಕಾ ಥುಶಾರಿ(2:05.27 ಸೆ.) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದರು.
ಭಾರತದ ಲಿಲ್ಲಿ ದಾಸ್ 2:07.49 ಸೆಕೆಂಡ್‌ನಲ್ಲಿ ಗುರಿ ತಲುಪಿ ಐದನೆ ಸ್ಥಾನ ಪಡೆದರು. ಪದಕ ಫೇವರಿಟ್ ಟಿಂಟು ಲುಕಾ ಸ್ಪರ್ಧೆ ಮುಗಿಸಲು ವಿಫಲರಾದರು.

ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ಒಟ್ಟು 5,942 ಅಂಕ ಗಳಿಸಿದ ಸ್ವಪ್ನಾ ಬರ್ಮನ್ ಚಿನ್ನದ ಪದಕ ತನ್ನದಾಗಿಸಿಕೊಂಡರು. ಜಪಾನ್‌ನ ಮೆಗ್ ಹೆಂಫಿಲ್(5883 ಅಂಕ) ಹಾಗೂ ಭಾರತದ ಪೂರ್ಣಿಮಾ ಹೆಂಬ್ರಮ್(5798) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಪುರುಷರ 800ಮೀ. ಫೈನಲ್‌ನಲ್ಲಿ ಜಿನ್ಸನ್ ಜಾನ್ಸನ್ 1:50.07 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಕಂಚಿಗೆ ತೃಪ್ತಿಪಟ್ಟರು. ಮಹಿಳೆಯರ ಡಿಸ್ಕಸ್ ಎಸೆತದ ಸ್ಪರ್ಧೆಯಲ್ಲಿ ಮೂವರು ಸ್ಪರ್ಧಿಗಳು ಪದಕ ಜಯಿಸಲು ವಿಫಲರಾದರು. ಕಮಲ್‌ಪ್ರೀತ್ ಕೌರ್, ಸೀಮಾ ಪೂನಿಯಾ ಹಾಗೂ ಹಿಮಾನಿ ಸಿಂಗ್ ಕ್ರಮವಾಗಿ 5, 6 ಹಾಗೂ 7ನೆ ಸ್ಥಾನ ಪಡೆದಿದ್ದಾರೆ.

<ದ್ಯುತಿ, ಸ್ರಬಾನಿ ನಂದಾ ಫೈನಲ್‌ಗೆ: ಮಹಿಳೆಯರ 200 ಮೀ.ಓಟದ ಸ್ಪರ್ಧೆಯಲ್ಲಿ ಸ್ಥಳೀಯ ಅಥ್ಲೀಟ್‌ಗಳಾದ ದ್ಯುತಿ ಚಂದ್ ಹಾಗೂ ಸ್ರಬಾನಿ ನಂದ ಫೈನಲ್‌ಗೆ ತಲುಪುವುದರೊಂದಿಗೆ ಪದಕದ ಭರವಸೆ ಮೂಡಿಸಿದರು.

ಈ ಇಬ್ಬರು ಓಟಗಾರ್ತಿಯರು ಶನಿವಾರ ನಡೆದ 4x100 ಮೀ. ರಿಲೇಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಒಡಿಶಾದ ಇನ್ನೋರ್ವ ಓಟಗಾರ ಅಮಿಯಾ ಕುಮಾರ್ ಮಲಿಕ್ ಪುರುಷರ 200 ಮೀ. ಓಟದಲ್ಲಿ ಫೈನಲ್‌ಗೆ ತಲುಪಿದ್ದಾರೆ. ಮಲಿಕ್ ಇದೇ ಟೂರ್ನಿಯಲ್ಲಿ 100 ಮೀ. ಓಟ ಹಾಗೂ ರಿಲೇ ತಂಡದಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News