‘ಸ್ವಂತ ಖರ್ಚಿನಲ್ಲೇ ತರಬೇತಿ ಪಡೆಯುತ್ತಿರುವೆ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ’

Update: 2017-07-09 18:45 GMT

ಹೊಸದಿಲ್ಲಿ, ಜು.9: ''ಕ್ರೀಡಾಕ್ಷೇತ್ರದಲ್ಲಿ ಖಾಸಗಿ ವಲಯದ ಒಳಗೊಳ್ಳುವಿಕೆ ತುಂಬಾ ಕಳಪೆಯಾಗಿದೆ. ಈ ವಿಷಯದಲ್ಲಿ ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರಭಾರತದ ಅಥ್ಲೀಟ್‌ಗಳು ತುಂಬಾ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ತಾನೂ ಸೇರಿದಂತೆ ಪ್ರತಿಯೊಬ್ಬರೂ ಸ್ವಂತ ಖರ್ಚಿನಲ್ಲಿ ತರಬೇತಿ ಪಡೆಯುತ್ತಿದ್ದೇವೆ. ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ''ಎಂದು ಈಗ ಭುವನೇಶ್ವರದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿರುವ ಮನ್‌ಪ್ರೀತ್ ಕೌರ್ ದುಃಖ ತೋಡಿಕೊಂಡಿದ್ದಾರೆ.

''ಒಲಿಂಪಿಕ್ಸ್ ಆರಂಭಕ್ಕೆ ಮೊದಲು ನಾನು ಎರಡು ಕಂಪೆನಿಗಳಿಂದ ಪ್ರಾಯೋಜಕತ್ವ ಪಡೆದಿದ್ದೆ. ಆದರೆ,ಒಲಿಂಪಿಕ್ಸ್ ಬಳಿಕ ನನಗೆ ಯಾರೂ ಪ್ರಾಯೋಜಕತ್ವ ನೀಡಿಲ್ಲ. ಖಾಸಗಿ ವಲಯದ ಕಂಪೆನಿಯು ಪ್ರೋತ್ಸಾಹ ನೀಡುತ್ತಿಲ್ಲ. ಇದೀಗ ನಮ್ಮ ಜೇಬಿನಿಂದಲೇ ಹಣ ಖರ್ಚುಮಾಡಿ ತರಬೇತಿ ಪಡೆಯಬೇಕಾಗಿದೆ. ತರಬೇತಿಯ ಜೊತೆಗೆ ಮನೆಯ ಖರ್ಚುವೆಚ್ಚವನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗಿದೆ''''ಎಂದು 6 ವರ್ಷದ ಬಾಲಕಿಯ ತಾಯಿಯಾಗಿರುವ ಮನ್‌ಪ್ರೀತ್ ಹೇಳಿದ್ದಾರೆ. ಖಾಸಗಿ ವಲಯದ ಕಂಪೆನಿಗಳಿಂದ ಪ್ರಾಯೋಜಕತ್ವ ಅಥವಾ ಧನಸಹಾಯ ಲಭಿಸಿದರೆ ತುಂಬಾ ಅನುಕೂಲವಾಗುತ್ತದೆ. ಆರ್ಥಿಕ ಸಮಸ್ಯೆಗಳಿಲ್ಲದಿದ್ದರೆ ಏಕಾಗ್ರತೆಯಿಂದ ಉತ್ತಮ ಪ್ರದರ್ಶನ ನೀಡಬಹುದು. ಆರ್ಥಿಕ ಸಮಸ್ಯೆ ಅಥ್ಲೀಟ್ ಪ್ರದರ್ಶನದ ಮೇಲೆ ಪರಿಣಾಮಬೀರುತ್ತದೆ'' ಎಂದು ಮನ್‌ಪ್ರೀತ್ ಅಭಿಪ್ರಾಯಪಟ್ಟರು.

ಪ್ರಸ್ತುತ ಪಟಿಯಾಲದಲ್ಲಿ ಪತಿ ಹಾಗೂ ಕೋಚ್ ಕರಣ್‌ಜಿತ್ ಸಿಂಗ್‌ರೊಂದಿಗೆ ತರಬೇತಿಯಲ್ಲಿ ತೊಡಗಿರುವ ಮನ್‌ಪ್ರೀತ್ ಅವರು ಪುತ್ರಿ ಜಸ್ನೂರ್‌ರಿಂದ ದೂರವಿದ್ದಾರೆ. ಪುತ್ರಿಯುಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಿದ್ದಾರೆ.

''ಜಸ್ನೂರ್‌ಗೆ ಆರು ವರ್ಷವಾಗಿದೆ. ಆಕೆ ಅಜ್ಜಿಯೊಂದಿಗೆ ಇದ್ದಾಳೆ. ಪುತ್ರಿಗೆ 10 ತಿಂಗಳಾದಾಗ ಅಜ್ಜಿಯ ಬಳಿ ಬಿಟ್ಟುಬಂದು ತರಬೇತಿಪಡೆಯಲು ಆರಂಭಿಸಿದ್ದೆ. ಅತ್ತೆಯೊಂದಿಗೆ ಪ್ರತಿದಿನ ಫೋನ್‌ನಲ್ಲಿ ಮಾತನಾಡುವೆ''ಎಂದು ಮನ್‌ಪ್ರೀತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News