ಸೆರೆನಾರ ಸಾರ್ವಕಾಲಿಕ ದಾಖಲೆ ಹಿಂದಿಕ್ಕಿದ ಫೆಡರರ್

Update: 2017-07-09 18:44 GMT

ಲಂಡನ್, ಜು.9: ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್ ಜರ್ಮನಿಯ ಮಿಸ್ಚಾ ಝ್ವೆರೆವ್‌ರನ್ನು ಮೂರು ಸೆಟ್‌ಗಳ ಅಂತರದಿಂದ ಮಣಿಸಿದರು. ಗ್ರಾನ್‌ಸ್ಲಾಮ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗರಿಷ್ಠ ಗೆಲುವು ದಾಖಲಿಸಿದ ಫೆಡರರ್ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರ ಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದನ್ನು ಮುರಿದರು.

  ಸೆರೆನಾ ಗ್ರಾನ್‌ಸ್ಲಾಮ್ ಟೂರ್ನಿ ಯಲ್ಲಿ ಒಟ್ಟು 316 ಸಿಂಗಲ್ಸ್ ಪಂದ್ಯ ಗಳನ್ನು ಜಯಿಸಿದ್ದರು. ಇದೀಗ 317 ಸಿಂಗಲ್ಸ್ ಪಂದ್ಯಗಳನ್ನು ಜಯಿಸಿರುವ ಸ್ವಿಸ್ ಮಾಂತ್ರಿಕ ಫೆಡರರ್, ಸೆರೆನಾರ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಹಿಂದಿಕ್ಕಿದರು. ಈ ಸಾಧನೆ ಮಾಡಿದ ಮೊದಲ ಟೆನಿಸ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ನೊವಾಕ್ ಜೊಕೊವಿಕ್(236), ಜಿಮ್ಮಿ ಕೊನ್ನರ್ಸ್‌(233) ಆ್ಯಂಡ್ರೆ ಅಗಾಸ್ಸಿ(225), ರಫೆಲ್ ನಡಾಲ್(217) ಆನಂತರದ ಸ್ಥಾನದಲ್ಲಿದ್ದಾರೆ.

ಶನಿವಾರ ಒಂದು ಗಂಟೆ, 50 ನಿಮಿಷಗಳ ನಡೆದ ಪಂದ್ಯದಲ್ಲಿ ಫೆಡರರ್ 27ನೆ ಶ್ರೇಯಾಂಕದ ಝ್ವೆರೆವ್‌ರನ್ನು 7-6(3), 6-4, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಇದರೊಂದಿಗೆ ವಿಂಬಲ್ಡನ್ ಟೂರ್ನಿಯಲ್ಲಿ 87ನೆ ಗೆಲುವು ದಾಖಲಿಸಿದರು. ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 317ನೆ ಪಂದ್ಯ ಜಯಿಸಿದರು. ವಿಲಿಯಮ್ಸ್(316), ಮಾರ್ಟಿನಾ ನವ್ರಾಟಿ ಲೋವಾ(306) ಹಾಗೂ ಕ್ರಿಸ್ ಎವರ್ಟ್(296) ಗ್ರಾನ್‌ಸ್ಲಾಮ್ ಟೂರ್ನಿ ಯಲ್ಲಿ ಗರಿಷ್ಠ ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿದ್ದಾರೆ.

35ರ ಪ್ರಾಯದ ಫೆಡರರ್ ಸೋಮವಾರ ನಡೆಯಲಿರುವ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಗ್ರಿಗೊರ್ ಡಿಮಿಟ್ರೊವ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News